ಅಲ್ಲಿಯೇ ಹತ್ತಿರ ಮತ್ತೊಬ್ಬ ಬಂಧುಗಳ ಮನೆಯಲ್ಲಿ ಪೂಜೆ ಇತ್ತು. ಸುಮಾರು ಇಪ್ಪತ್ತೈದು ಮಂದಿ ಭಾಗವಹಿಸಿದ್ದರು. ದೊಡ್ಡ ಅಂಗಳ, ಹಳೆಯ ಕಂಬ, ತೊಲೆ, ವಿಶಾಲವಾದ ಹಜಾರ್, ಮಾಳಿಗೆ, ಮೆಟ್ಟಿಲುಗಳನ್ನು ಹೊಂದಿರುವ ಮನೆಯದು. ಹೊರಗೆ ಹೆಚ್ಚಿಗೆ ಬಿಡುವು ಕೊಡದೆ ಮಳೆ ಸುರಿಯುತ್ತಿತ್ತು. ದೇವರಕೋಣೆಯಲ್ಲಿ ಮಂತ್ರ ಪಠಣದೊಂದಿಗೆ ಪೂಜೆ ನಡೆಯುತ್ತಿತ್ತು. ಕತ್ತಲಿನ ದೇವರಕೋಣೆಯಲ್ಲಿ ಎಣ್ಣೆಯ ದೀಪ ಹದವಾಗಿ ಉರಿದು ಬೆಳಕು ಬೀರುತ್ತಿತ್ತು. ನಾನಾ ಆಕಾರದ ಆರತಿಗಳು, ಶಂಖ, ಜಾಗಟೆ, ತಾಳಗಳ ಹಿಮ್ಮೇಳ ಭಕ್ತಿದಾಯಕವಾಗಿತ್ತು. ಅಂತಹ ಸಂದರ್ಭ ಅಪರೂಪಕ್ಕೆ ಒಲಿದಿತ್ತು. ಆದ್ದರಿಂದ ಪ್ರತಿಯೊಂದನ್ನೂ ಚೆನ್ನಾಗಿ ಗಮನಿಸುತ್ತಾ ಮುಳುಗಿದೆ.
ದೇವರಕೋಣೆಗೆ ಹೋಗುವಾಗ ಅಂಗಿ ಕಳಚಿ ಇಡಲೇಬೇಕು ಎಂದು ಮನೆಯ ಹಿರಿಯರು ಕಿರಿಯರಿಗೆ ಸೂಚಿಸಿದರು. ತೀರ್ಥ, ಪ್ರಸಾದ ಸೇವಿಸಿದ ನಂತರ ಸವಿ ಭೋಜನ ಉಂಡೆ. ಉದ್ದನೆಯ ಜಗಲಿಯಲ್ಲಿ ಹರಟುತ್ತ ಭೋಜನ ಸವಿಯುವಾಗಲೂ ಹೊರಗೆ ಮಳೆ ತುಂತುರು ಹನಿಯುತ್ತಿತ್ತು. ಇದರಿಂದಾಗಿ ಊಟಕ್ಕೆ ಸ್ವಾದ ಹೆಚ್ಚಿದಂತೆ ನನಗೆ ಅನ್ನಿಸುತ್ತಿತ್ತು.
ಅನ್ನ, ಹಪ್ಪಳ, ಸಾರು, ಪಲ್ಯ, ಗೊಜ್ಜು, ದೀಗುಜ್ಜೆ ಸಾಂಬಾರು, ಪಾಯಸ, ಕೇಸರಿಭಾತು, ಮಿಕ್ಸ್ ಚರ್, ಮಜ್ಜಿಗೆ ಹುಳಿ, ಮಾವಿನ ಮಿಡಿಯ ಉಪ್ಪಿನಕಾಯ ಸವಿದು ಊಟವಾದ ನಂತರ ವರಾಂಡದಲ್ಲಿ ಎಲ್ಲರೂ ಕೂತು, ಅವರವರಿಗೆ ಬೇಕಾದಂತೆ ಪವಡಿಸುತ್ತ ಸುಮಾರು ಒಂದು ಗಂಟೆ ಹರಟೆ ಹೊಡೆದೆವು. ಯಾರೋ ಒಬ್ಬರು ಹಿರಿಯರು ವಂಶ ವೃಕ್ಷದ ಬಗ್ಗೆ ಮಾತೆತ್ತಿದರು.
ನಾವೆಲ್ಲ ವಿಶ್ವಾಮಿತ್ರ ಗೋತ್ರದವರು. ಹವ್ಯಕರು ಉತ್ತರದವರು. ಪೊಸಡಿಗುಂಪೆಗೆ ಬಂದು ನೆಲಸಿದವರು. ಇಡುಗುಂಜಿಯ ಗಣಪತಿ ನಮ್ಮ ದೇವರು ಎಂದರು. ತಮ್ಮ ವಂಶ ವೃಕ್ಷ ಕಂಡುಹಿಡಿಯಲು ನಡೆಸಿದ ಸಾಹಸವನ್ನು ನಾನಾ ರೀತಿಯಲ್ಲಿ ಬಣ್ಣಿಸಿದರು. ಕೆಲವರ ಮನೆಯಲ್ಲಿ ಪುರಾತನ ತಾಳೇಗರಿಯ ಓಲೆಗಳು ಇವೆ. ಅವುಗಳನ್ನು ಶೋಧಿಸಿದರೆ ವಂಶ ವೃಕ್ಷ ಸಿಗುವ ಸಾಧ್ಯತೆ ಇರುತ್ತವೆ. ಆದರೆ ತಾಳೆಗರಿ ಯಾಕೆ ಬೇಕೆಂದು ಬಿಸಾಡಿದವರೇ ಹೆಚ್ಚು. ಇನ್ನು ಕೆಲವರು ಮ್ಯೂಸಿಯಮ್ಮಿಗೆ ಕೊಟ್ಟಿದ್ದಾರೆ ಎಂದರು.
ಜೋರಾಗಿ ಬೀಳುತ್ತಿರುವ ಮಳೆಯಿಂದ ಸಂಭವನೀಯ ತೊಂದರೆಗಳ ಬಗ್ಗೆ ಚರ್ಚೆ ನಡೆಯಿತು. ಬೆಳೆ ಹಾನಿಯನ್ನು ತಪ್ಪಿಸುವ ಬಗ್ಗೆ, ಆಂಧ್ರ ಮುಖ್ಯಮಂತ್ರಿಯ ದುರ್ಮರಣ ಹಾಗೂ ನಂತರ ಸಂಭವಿಸಿದ ಸಾವು-ನೋವಿನ ಬಗ್ಗೆ ಸಹ ಮಾತಾಯಿತು. ಜತೆಗೆ ಕಾಫಿ ಸೇವನೆಯೂ ಸಾಂಗವಾಗಿ ನೆರವೇರಿತು. ಅಲ್ಲಿಗೆ ಕಾರ್ಯಕ್ರಮ ಮುಕ್ತಾಯದ ಘಟ್ಟ ತಲುಪಿತು ಎಂದರ್ಥ. ಎಲ್ಲ ನೆಂಟರೂ ಅವರವರ ಮನೆಗೆ ತೆರಳಿದರು. ಕೆಲವರು ಕಾರಿನಲ್ಲಿ, ಕೆಲವರು ಬೈಕಿನಲ್ಲಿ ಹಾಗೂ ಹಲವರು ಕಾಲ್ನಡಿಗೆಯಲ್ಲಿ ತೆರಳಿದರು.
ಅವರ ಸುಖವನ್ನು ಕಂಡು ಈ ಊರಿನ್ನು ಬಿಟ್ಟು ನಾಳೆ ಬೆಂಗಳೂರಿಗೆ ಹೋಗಲೇ ಬೇಕಲ್ವಾ..ಎಂದು ಅನ್ನಿಸಿತು.
ಊರಿನ ಕಡೆ ಬಂದಿದ್ದಾಗ ನಿಮ್ಮ ಭೇಟಿ ಆಗಬಹುದು ಅಂದುಕೊಂಡಿದ್ದೆವು, ಹರೀಶ್ ಮತ್ತು ನಾನು. ಆದರೆ ಹಾಗಾಗಲಿಲ್ಲ.... ಸಾರಿ... ಬಂದೇ ಇರಲಿಲ್ವಾ ಹೇಗೆ? ಕಳತ್ತೂರು ಕಡೆಗೆ?
ReplyDeleteನಿಜ ಗೆಳೆಯಾ, ಈ ಸಲ ಕಳತ್ತೂರಿಗೆ, ಕಿದೂರಿಗೆ, ಪುತ್ತೂರಿಗೆ ಬಂದು ನೀವು ಮತ್ತು ಹರೀಶ್ ಹಳೆಮನೆಯವರನ್ನೂ ಭೇಟಿಯಾಗಬೇಕೆಂದು ಬಯಸಿದ್ದೆ. ಆದರೆ ಪುತ್ತೂರಿನಲ್ಲಿಯೇ ಸಮಯ ಮುಗಿದು ಅನಿವಾರ್ಯವಾಗಿ ಹಿಂತಿರುಗುವಂತಾಯಿತು. ಸಾರಿ..ಮುಂದಿನ ಸಲ ಬರುತ್ತೇನೆ. ( ಅಂದ ಹಾಗೆ ಈ ಬಾರಿ ಬರುವಾಗ ರೈಲಿನಲ್ಲಿ ನನ್ನ ಮೊಬೈಲ್ ಕಳೆದು ಹೋಯಿತು. ಹೀಗಾಗಿ ನಿಮಗೆ ಮೆಸೇಜ್ ಕಳಿಸಲು ಸಾಧ್ಯವಾಗಲಿಲ್ಲ
ReplyDelete