ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್‌ಗೆ ನಿನ್ನೆ ಹೋಗಿದ್ದೆ. ಸ್ಕೂಮಿ ಇಂಟರ್‌ನ್ಯಾಶನಲ್ ಕಂಪನಿಯ ಮುಖ್ಯಸ್ಥ ಕನೇಸನ್ ವೇಳುಪಿಳ್ಳೈ ಅವರನ್ನು ಸಂದರ್ಶಿಸುವ ಕೆಲಸ ಇತ್ತು. ಹೋಟೆಲ್ ಆವರಣ ಪ್ರವೇಶಿಸುತ್ತಿದ್ದಂತೆ ಯಾಕೋ ಪುಷ್ಪಕ ವಿಮಾನ ಚಿತ್ರ ನೆನಪಾಯಿತು. ಚಿತ್ರದ ಬಹುಪಾಲು ಚಿತ್ರೀಕರಣ ಇದೇ ಹೋಟೆಲ್‌ನಲ್ಲಿ ನಡೆದಿದೆ. ಕಮಲ್ ಹಾಸನ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಈ ಚಿತ್ರದ ನಿರ್ಮಾಪಕ ಶೃಂಗಾರ್ ನಾಗರಾಜ್ ಅವರನ್ನೂ ಇತ್ತೀಚೆಗೆ ಸಂದರ್ಶಿಸಿದ್ದೆ. ಆದ್ದರಿಂದ ಅವರೂ ನೆನಪಾದರು.ಹೋಟೆಲ್ ಈವತ್ತಿಗೂ ಭವ್ಯತೆಯನ್ನು ಉಳಿಸಿಕೊಂಡಿದೆ. ಸಿಬ್ಬಂದಿ ನಗುಮೊಗದಿಂದ ಬರ ಮಾಡಿಕೊಳ್ಳುತ್ತಾರೆ. ಯಾವುದೋ ದೇಶದ ವಿದೇಶಿಯರು ಅವರ ಸಂಸಾರ ಸಮೇತ ಹೋಟೆಲ್‌ನೊಳಗೆ ಅಡ್ಡಾಡುತ್ತಿರುತ್ತಾರೆ. ಈಜುಕೊಳದಲ್ಲಿ ಯಾವನೋ ಭೂಪ ತನ್ನ ಪಾಡಿಗೆ ಈಜುತ್ತಿರುತ್ತಾನೆ. ಕಾಫಿ ಹೌಸ್‌ನಲ್ಲಿ ಮತ್ತಾರೋ ಸೋಫಾದಲ್ಲಿ ಕುಳಿತು ಗಹನವಾದ ಸಮಾಲೋಚನೆ ನಡೆಸುತ್ತಿರುತ್ತಾರೆ. ಪರಿಚಾರಕ ಬೇಕಾದ್ದನ್ನು ತಂದುಕೊಡುತ್ತಾನೆ.
ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ಇದು ಹೆಮ್ಮೆಯ ವೈಭವೋಪೇತ ಹೋಟೆಲ್ ಆಗಿತ್ತು. ಈಗ ಅಂಥ ಅನೇಕ ಹೋಟೆಲ್‌ಗಳ ಸರಣಿಯೇ ರಾಜಧಾನಿಯಲ್ಲಿದೆ. ಒಂದಕ್ಕಿಂತ ಮತ್ತೊಂದು ಅದ್ದೂರಿ. ವಿಂಡ್ಸರ್ ಹೋಟೆಲ್‌ನಲ್ಲಿ ಸಂದರ್ಶಿಸಿದ ವೇಳು ಪಿಳ್ಳೈ ಶ್ರೀಲಂಕಾದವರು. ಅವರ ಪತ್ನಿ ಪಂಜಾಬಿ ಮೂಲದವರಂತೆ. ನೋಡಲು ಸ್ಥೂಲಕಾಯದ ವ್ಯಕ್ತಿ. ಆದರೆ ಸರಳ ಮನುಷ್ಯ. ಸಲೀಸಾಗಿ ಮಾತನಾಡುತ್ತಿದ್ದ ಅವರ ಶೈಲಿ ಇಷ್ಟವಾಯಿತು. ಬೆಂಗಳೂರಿಗೆ ಮೋನೊ ರೈಲಿನ ಅಗತ್ಯವನ್ನು ಅಂಕಿ ಅಂಶ ಹಾಗೂ ವಿಡಿಯೋ ಸಹಿತ ವಿವರಿಸಿದರು.

No comments:
Post a Comment