Wednesday 9 September 2009

ಉದ್ಯೋಗದಲ್ಲಿ ಕೃಷಿಗೂ ಗೌರವ ಕೊಡಿ..ಪ್ಲೀಸ್

ಅವರ ಹೆಸರು ಹುಚ್ಚಪ್ಪ.
ಸೊರಬದ ಕಾನಮೂಲೆ ಗ್ರಾಮದವರು. ವಯಸ್ಸು ೨೮ ವರ್ಷ. ಓದಿದ್ದಿ ಎಸ್ಸೆಸ್ಸೆಲ್ಸಿ. ಆರು ಮಂದಿಯ ತುಂಬು ಸಂಸಾರ. ಎರಡೂಕಾಲು ಎಕರೆ ಕೃಷಿ ಜಮೀನು. ಕಳೆದ ಎಂಟು ವರ್ಷಗಳಿಂದ ಸಾವಯವ ಪದ್ಧತಿಯನ್ನು ಅಳವಡಿಸಿದ್ದಾರೆ. ಅದಕ್ಕೂ ಮುಂಚೆ ಡಿಇಪಿ, ಯೂರಿಯಾ, ಫ್ಯಾಕ್ಟಂಫೋಸ್ ಅಂತ ರಾಸಾಯನಿಕ ಬಳಸಿ ಭೂಮಿಯ ಫಲವತ್ತತೆ ನಷ್ಟವಾಗಿತ್ತು. ಆದರೆ ಈವತ್ತು ಚಿತ್ರಣ ಬದಲಾಗಿದೆ. ಊಟಕ್ಕೆ ಸಾಕಾಗಿ ಮಿಕ್ಕುವಷ್ಟು ಭತ್ತ ಬೆಳೆಯುತ್ತಿದ್ದಾರೆ. ಭತ್ತ ಬೆಳೆಯುವುದರಿಂದ ವರ್ಷಕ್ಕೆ ಸುಮಾರು ೨೫ ಸಾವಿರ ರೂ. ಸಂಪಾದನೆಯಾಗುತ್ತದೆ. ಹೀಗಾಗಿ ಗದ್ದೆ, ನಾಟಿಯ ನಂತರ ಬಿಡುವಿನಲ್ಲಿ ಬೇರೆ ಕಡೆ ಕೂಲಿ ಕೆಲಸಕ್ಕೂ ಹೋಗುತ್ತಾರೆ. ಅದನ್ನು ಮಾಡಬಾರದು ಎಂಬ ಕೀಳರಿಮೆಯಿಲ್ಲ. ಗದ್ದೆ, ತೋಟಕ್ಕೆ ಹಟ್ಟಿಯ ಗೊಬ್ಬರ, ಸೊಪ್ಪು ಹಾಕುತ್ತಾರೆ. ಎತ್ತು, ದನ ಅಂತ ಹದಿನೈದು ಜಾನುವಾರುಗಳಿವೆ.
ಎರಡೂಕಾಲು ಎಕರೆಯಲ್ಲಿ ಭತ್ತ ಮಾತ್ರವಲ್ಲದೆ ಅಡಿಕೆ, ಕಬ್ಬು, ಶುಂಠಿ, ಎಳ್ಳು, ಬಾಳೆ ಹಾಗೂ ನಾನಾ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಸ್ವಸಹಾಯದ ನಂಟಿದೆ. ಎರೆ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಈ ಕಾನಮೂಲೆಯಲ್ಲಿ ಇನ್ನೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಾಗಿಲ್ಲ. ಅಕಸ್ಮಾತ್ ಆರಂಭಿಸಿದರೂ, ಅಲ್ಲಿ ಕೊಡುವುದಕ್ಕಿಂತ ( ೮೨ ರೂ. ದಿನಕ್ಕೆ) ಹೆಚ್ಚು ಸಂಬಳ ಬೇರೆ ಕಡೆ ( ಕನಿಷ್ಠ ನೂರು ರೂ. ದಿನಕ್ಕೆ ) ಸಿಗುತ್ತದೆ. ಎಳ್ಳಿನಿಂದ ಎಣ್ಣೆ ತಯಾರಿಸುತ್ತಾರೆ. ಊಟಕ್ಕೆ ಅವರದ್ದೇ ಭತ್ತವಿದೆ. ತರಕಾರಿ , ಸೊಪ್ಪು ಬೆಳೆಯುತ್ತಾರೆ. ಒಂದೇ ಬೆಳೆಯನ್ನು ನೆಚ್ಚಿಕೊಂಡಿಲ್ಲ. ಪಶು ಸಂಪತ್ತಿನ ಮಹತ್ವದ ಅರಿವಿದೆ. ಹೀಗಾಗಿ ಎಸ್ಸೆಸ್ಸೆಲ್ಸಿ ಓದಿರುವ ಹುಚ್ಚಪ್ಪ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ವಲಸೆ ಹೋಗಿಲ್ಲ. ನಿಜ. ೨೦೦೧ರಿಂದ ಮೊದಲ ಮೂರು ವರ್ಷ ರಾಸಾಯನಿಕ ಕೈಬಿಟ್ಟಿದ್ದರಿಂದ ಇಳುವರಿ ಇಳಿದಿತ್ತು. ಆದರೆ ಈಗ ಮಣ್ಣಿನ ಫಲವತ್ತತೆ ಮರಳಿದೆ. ಇನ್ನು ಆ ಅಂಜಿಕೆಯಿಲ್ಲ. ದುಬಾರಿ ಕೆಮಿಕಲ್ಸ್ ಅಗತ್ಯವಿಲ್ಲ. ಹುಟ್ಟಿದೂರಿನಲ್ಲಿಯೇ ಇದ್ದುದರಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ.
ನೀತಿ : ಆರು ಮಂದಿಯ ಸಂಸಾರಕ್ಕೆ ಎರಡೂಕಾಲು ಎಕರೆ ಮತ್ತು ಕೂಲಿ ಕೆಲ್ಸ ಸಾಕು
ಶಿಕಾರಿಪುರದ ಮಾದನಹಳ್ಳಿಯ ಸಂಗಪ್ಪ (೪೫) ಕಳೆದ ಮೂರು ವರ್ಷಗಳಿಂದ ಸಾವಯವ ಕೃಷಿಕರಾಗಿ ಪರಿವರ್ತನೆ ಹೊಂದಿದ್ದಾರೆ. ಮೊದಲು ಕಾಂಪ್ಲೆಕ್ಸ್ ಗೊಬ್ಬರ ಹಾಕುತ್ತಿದ್ದರು. ಜೀವಾಮೃತ ತಯಾರಿಸುತ್ತಾರೆ. ಹತ್ತೆಕೆರೆ ಜಮೀನಿನಲ್ಲಿ ರಾಗಿ, ಭತ್ತ, ಮೆಕ್ಕೆ ಜೋಳ, ಶುಂಠಿ, ಅಡಿಕೆ, ಬಾಳೆ, ತೆಂಗು ಬೆಳೆಯುತ್ತಾರೆ. ಮೈಸೂರಿನಲ್ಲಿ ನಡೆದ ಪಾಳೇಕಾರ್ ಶಿಬಿರದಲ್ಲಿ ಜೀವಾಮೃತದ ಬಗ್ಗೆ ತಿಳಿದರು. ಕುಮದ್ವತಿ ನದಿಗೆ ಕಟ್ಟಿದ ಅಣೆಕಟ್ಟೆಯ ಅಂಜನಾಪುರ ಕಾಲುವೆಯಿಂದ ನೀರು ಸಿಗುತ್ತಿದೆ. ಒಂದು ಕೊಳವೆ ಬಾವಿಯಿದೆ. ಜಮೀನಿನ ಸುತ್ತ ಬದುವಿನಲ್ಲಿ ಮಾವು, ಸಪೋಟ, ಬೇವು, ನೀಲಗಿರಿ, ಸಾಗುವಾನಿ, ಸರ್ವೇ ಮರ ಅಂತ ೩೫ ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಇವರು ಓದಿದ್ದು ಕಮ್ಮಿ. ಮಗ ವಿಶ್ವನಾಥ ಬಿಎ ಓದಿದ್ದಾನೆ. ತಂದೆಯ ಹಾದಿಯಲ್ಲಿ ಕೃಷಿಗೆ ಮರಳಿದ್ದಾನೆ. ಕೃಷಿಗೆ ಗೌರವ ಇಲ್ಲದಿರುವ ಈ ಕಾಲದಲ್ಲಿ ವಿಶ್ವನಾಥನಂತೆ ಪದವಿ ಪಡೆದೂ ವ್ಯವಸಾಯ ಮಾಡುವವರು ನಿಧಾನವಾಗಿ ಹೆಚ್ಚುತ್ತಿದ್ದಾರೆ. ಇದಕ್ಕೆ ಎರಡು ಕಾರಣ. ಒಂದು ಎಷ್ಟು ಪ್ರಯತ್ನಿಸಿದರೂ ಪೇಟೆಯಲ್ಲಿ ಕೆಲಸ ಸಿಗದೆ ಕಲಿತ ಪಾಠ. ಎರಡನೆಯದ್ದು ನಿಜಕ್ಕೂ ಕೃಷಿಯ ಕಡೆಗಿನ ಆಸಕ್ತಿ. ಅದರಲ್ಲಿ ನೆಮ್ಮದಿ ಕಂಡುಕೊಳ್ಳುವ ಅಪರೂಪದ ಗುಣ. ಈವತ್ತು ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳೂ ಕೃಷಿಯಲ್ಲಿ ಆನಂದ ಕಂಡುಕೊಳ್ಳಬೇಕೆಂಬ ಹಂಬಲದಲ್ಲಿ ಉದ್ದೇಶಪೂರ್ವಕವಾಗಿಯೇ ವ್ಯವಸಾಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಂಬಿಎ, ಬಿಬಿಎ ಪೂರೈಸಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇಪ್ಪತ್ತು, ಮೂವತ್ತು ಸಾವಿರ ರೂ. ಸಂಬಳ ಮತ್ತು ಜತೆಗೆ ತಡೆಯಲಾಗದಷ್ಟು ಒತ್ತಡ ಮತ್ತು ಜಂಜಾಟದ ಕೆಲಸಕ್ಕೆ ರೋಸಿ ಹೋಗಿ ಮರಳಿ ಊರಿಗೆ ಬಂದು, ಅಚ್ಚುಕಟ್ಟಾಗಿ ತೋಟ ಮಾಡಿ ಮದುವೆ, ಮಕ್ಕಳು ಅಂತ ಸಂಸಾರ ನಡೆಸುತ್ತಿರುವ ಮಂದಿ ಇದ್ದಾರೆ.
ನೀತಿ : ಎಂಜಿನಿಯರಿಂಗ್ ಓದಿದವರೂ ಯಶಸ್ವಿ ಕೃಷಿಕರಾಗುತ್ತಾರೆ
ಭದ್ರಾವತಿಯ ಹಗರದಹಳ್ಳಿಯ ಶೇಖರಯ್ಯ ಸ್ವತಃ ರಾಸಾಯನಿಕ ಗೊಬ್ಬರದ ಅಂಗಡಿ ಇಟ್ಟಿದ್ದಾರೆ. ೧೯೭೯ರಿಂದ ೨೦ ವರ್ಷ ನಿರಂತರ ಮಾರಾಟದ ಅನುಭವ ಅವರಿಗಿದೆ. ಆದರೆ ತಾವು ತೋಟಕ್ಕೆ ಬಳಸುವುದಿಲ್ಲ. ಹತ್ತೆಕೆರೆ ಜಮೀನಿನಲ್ಲಿ ಅಡಿಕೆ, ಬಾಳೆ, ಸೋಯಾಬೀನ್ ಬೆಳೆದಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಾವಯವವನ್ನು ಅಳವಡಿಸುತ್ತಿರುವ ಪ್ರಯೋಗಶೀಲತೆ ಅವರಲ್ಲಿದೆ. ಅಡಿಕೆ ತೋಟದಲ್ಲಿ ಸದಾ ಹಸಿರೆಲೆ ತುಂಬಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಅದುವೇ ಗೊಬ್ಬರ. ಇದರಿಂದ ಅಡಿಕೆ ಮರ ಅಕಾಲಿಕವಾಗಿ ಸೊರಗಿ ಸಾಯುವುದು ನಿಂತಿದೆ. ಅಷ್ಟರಮಟ್ಟಿಗೆ ಉಳಿತಾಯವಾಗಿದೆ. ಇಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಫಲವಾಗಿದೆ. ಯೋಜನೆಯಲ್ಲಿ ದಿನಕ್ಕೆ ೮೨ ರೂ. ಕೊಟ್ಟರೆ, ಹೊರಗಡೆ ನೂರೈವತ್ತು ರೂ.ಗೆ ಕೊರತೆ ಇಲ್ಲದಂತೆ ಕೆಲಸ ಸಿಗುತ್ತಿದೆ. ಹೀಗಿರುವಾಗ ಯಾರು ಇದಕ್ಕೆ ಬರುತ್ತಾರೆ ? ಹೀಗಿದ್ದರೂ ಶೇಖರಯ್ಯನವರಿಗೆ ಈಗೀಗ ಕೃಷಿ ತೀರಾ ತ್ರಾಸದಾಯಕವಾಗುತ್ತಿದೆ. ವಯಸ್ಸಾಗುತ್ತಿದೆ. ಕೃಷಿ ಭೂಮಿ ಒಂದೆರೆಡು ಎಕರೆಯಲ್ಲ, ಹತ್ತೆಕೆರೆ ನೋಡಿಕೊಳ್ಳಬೇಕಾದರೆ ಒಬ್ಬರಿಂದ ಸಾಧ್ಯವೇ ಇಲ್ಲ. ಹೇಗೋ ಹೊಂದಾಣಿಕೆ ಮಾಡಿಕೊಂಡು ಇದ್ದಾರೆ. ಅತ್ತ ವ್ಯಾಪಾರವೂ ಇದೆ. ಹೀಗಾಗಿ ಮೋಸವಿಲ್ಲ.
ನೀತಿ : ಬೇಕಾದರೆ ರಾಸಾಯನಿಕ ಗೊಬ್ಬರದ ಅಂಗಡಿ ಇಡಿ, ಆದರೆ ನಿಮ್ಮ ತೋಟಕ್ಕೆ ಬ್ಯಾಡ್ರಿ..
ಶಿವಮೊಗ್ಗ ಗ್ರಾಮಾಂತರದ ಯಲವಟ್ಟಿಯಲ್ಲಿ ಎಲ್ಲ ಕಡೆಗಳಂತೆ ಕೃಷಿಗೆ ಕಾರ್ಮಿಕರು ಸಿಗದೆ ಸಮಸ್ಯೆ ತೀವ್ರವಾಗಿದೆ. ಒಂದೆರಡು ಗಂಟೆ ಕೆಲಸ ಮಾಡಿದಂತೆ ಮುಗಿಸಿ ಎಂಬತ್ತೆರಡು ರೂಪಾಯಿ ಸಂಪಾದಿಸುವ ಸುಲಭದ ಯೋಜನೆಯಾದ ಗ್ರಾಮೀಣ ಖಾತರಿ ಇಲ್ಲಿ ಇದೆ. ಮಲ್ಲಿಕಾರ್ಜುನ ಉತ್ಸಾಹಿ ಕೃಷಿಕ. ಎಂಟು ಎಕರೆ ಭೂಮಿಯಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದಾರೆ. ಅಡಿಕೆ, ತೆಂಗು, ಬಾಳೆ, ಎಳ್ಳು ಮಾತ್ರವಲ್ಲದೆ ಆಯುರ್ವೇದ ಮೂಲಿಕೆಗಳನ್ನು ಬೆಳೆಸಿದ್ದಾರೆ. ಅಮೃತ ಬಳ್ಳಿ, ಹಿಪ್ಪಿಲಿ, ಲಾವಂಚ. ಲಿಂಬೆ, ಕಾಡು ಬಾಳೆ, ಇನ್ಸುಲಿನ್ ಗಿಡ ಅಂತ ಪಟ್ಟಿ ಬೆಳೆಯುತ್ತದೆ. ಅವರೂ ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ೨೦೦೩-೦೪ರ ಸಾಲಿನ ಕೃಷಿ ಪಂಡಿತ ಪುರಸ್ಕಾರ ಅವರಿಗೆ ಸಿಕ್ಕಿದೆ. ಹಂತ ಹಂತವಾಗಿ ಒಂದೊಂದೇ ಎಕರೆ ಜಾಗವನ್ನು ಸಾವಯವಕ್ಕೆ ಒಳಪಡಿಸಿದ ಮಲ್ಲಿಕಾರ್ಜುನ, ಎಂಟು ವರ್ಷಗಳಲ್ಲಿ ಅನೇಕ ವಿಷಯ ಕಲಿತಿದ್ದಾರೆ. ಪತ್ರಿಕೆ, ವಿಚಾರಸಂಕಿರಣ, ಶಿಬಿರಗಳಿಂದ ತಿಳಿದುಕೊಂಡಿದ್ದಾರೆ. ಸಮಾನಮನಸ್ಕ ಗೆಳೆಯರ ಗುಂಪು ಸದಾ ಕೃಷಿಯಲ್ಲಿ ಪ್ರಯೋಗಶೀಲತೆಯ ಬಗ್ಗೆ ಚರ್ಚಿಸುತ್ತದೆ. ಕೆಲವು ಔಷಧ ಕಂಪನಿಗಳು ಊರಲ್ಲಿ ಹಣದ ಆಮಿಷ ತೋರಿಸಿ ಔಷಯ ಬಳ್ಳಿಗಳನ್ನು ಬೆಳೆಸಿ, ಕೊನೆಗೆ ಏನೂ ಕೊಡದೆ ನಾಪತ್ತೆಯಾದ ಕಥೆಗಳು ಇಲ್ಲಿವೆ. ಇಂತಹ ವಿದ್ಯಮಾನಗಳ ಬಗ್ಗೆ ರೈತಾಪಿ ಗೆಳೆಯರ ಗುಂಪು ಚರ್ಚಿಸುತ್ತದೆ. ಮಾಹಿತಿ ವಿನಿಮಯವಾಗುತ್ತದೆ. ಯಲವಟ್ಟಿಯ ಮಲ್ಲಿಕಾರ್ಜುನ , ಹಾರನಹಳ್ಳಿಯ ಮಲ್ಲಿಕಾರ್ಜುನ, ಚಿಕ್ಕೊಳ್ಳಿಯ ಹನುಮಂತಪ್ಪ ಅಂತ ಗೆಳೆಯರ ಗುಂಪು ಸಾವಯವ ಕೃಷಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಇದರಿಂದ ಉಂಟಾಗುವ ಉಪಯೋಗದ ಬಗ್ಗೆಯೇ ಒಂದು ಪುಸ್ತಕ ಬರೆಯಬಹುದು. ಇವರೆಲ್ಲ ಕೆಲಸವನ್ನು ಹುಡುಕಿ ಬೆಂಗಳೂರಿಗೆ ಬರಲ್ಲ.
ನೀತಿ : ನಾಲ್ಕು ಮಂದಿ ಕೃಷಿಕರು ವೀಳೆಯ ಮೆಲ್ಲುವಾಗ, ತಮ್ಮ ವೃತ್ತಿಪರತೆಯ ಬಗ್ಗೆ ಚರ್ಚಿಸಬೇಕು.

No comments:

Post a Comment