Tuesday 22 September 2009

ಗ್ರಾಮೀಣರಿಗೆ ಸರಕಾರಿ ಉದ್ಯೋಗ, ಸಂಬಳ ಮಾತ್ರ ಕೇಳಬೇಡಿ

ಉತ್ತರಕರ್ನಾಟಕದ ಕೃಷಿ ಕಾರ್ಮಿಕರು ದಿನಕ್ಕೆ ೩೦ ರೂ. ಕೊಟ್ಟರೆ ಒಪ್ಪುತ್ತಾರೆ.
ಹಾಗಂತ ಕರಾವಳಿ ಕರ್ನಾಟಕದಲ್ಲಿ ನೂರು ಅಂದರೆ ನೂರು ಸಲ ಉಗಿದಾರು. ತೆಂಗಿನ ಕಾಯಿ ಕೊಯ್ಯಬೇಕಿದ್ದರೆ ಮರಕ್ಕೆ ಏಳರಿಂದ ೧೦ ರೂ. ನೀಡಲೇಬೇಕು. ಅಡಿಕೆ ಮರ ಹತ್ತಬೇಕಾದರಂತೂ ಮುನ್ನೂರು ಮುಂದಿಡಲೇಬೇಕು. ಅಷ್ಟೇ..
ಊರಿನಿಂದ ಊರಿಗೆ ಕಾರ್ಮಿಕರ ವೇತನದಲ್ಲಿ ವ್ಯತ್ಯಾಸ ಇದೆ. ಆದರೆ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದೇಶದ ಉದ್ದಗಲಕ್ಕೂ ದಿನದ ಸಂಬಳ ೮೨ ರೂಪಾಯಿ ಮಾತ್ರ ಓದುಗ ದೊರೆಯೇ...
ಪರಿಣಾಮ ?
ಸದ್ಯಕ್ಕೆ ದೇಶದಲ್ಲಿ ನಿರುದ್ಯೋಗದ ದರ ಶೇ.೭.೮ರಷ್ಟಿದೆ. ಅದೃಷ್ಟವಶಾತ್ ಕೌಟುಂಬಿಕ ವ್ಯವಸ್ಥೆ ಅನ್ನುವುದು ಈ ದೇಶದಲ್ಲಿ ಇನ್ನೂ ಚಾಲ್ತಿಯಲ್ಲಿರುವುದರಿಂದ ನಿರುದ್ಯೋಗಿಗಳು ಬೀದಿಪಾಲಾಗುತ್ತಿಲ್ಲ. ಹೀಗಿದ್ದರೂ ಗತ್ಯಂತರವಿಲ್ಲದೆ ಗ್ರಾಮೀಣ ಪ್ರದೇಶಗಳಿಂದ ಭಾರಿ ಸಂಖ್ಯೆಯ ಜನ ಕೆಲಸ ಹುಡುಕುತ್ತ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಅದು ಅವರ ತಪ್ಪಲ್ಲ ಬಿಡಿ. ದೇಶದಲ್ಲಿ ಶೇ.೬೫ಕ್ಕಿಂತ ಹೆಚ್ಚು ಮಂದಿ ೩೫ ವರ್ಷಕ್ಕಿಂತ ಕೆಳಗಿನವರು ಇದ್ದಾರೆ. ನಿರುದ್ಯೋಗದ ದರವನ್ನು ನಿಯಂತ್ರಿಸಬೇಕಾದರೆ ಮುಂದಿನ ಐದು ವರ್ಷಗಳಲ್ಲಿ ೬ ಕೋಟಿ ಉದ್ಯೋಗವನ್ನು ಸೃಷ್ಟಿಸಿದರೂ ಕಡಿಮೆಯೇ. ನಗರಗಳಿಂದ ಮಾತ್ರ ಇದು ಆಗುವ ಹೋಗುವ ಮಾತಲ್ಲ. ಆದ್ದರಿಂದ ಉದ್ಯೋಗ ಖಾತರಿಗೊಂದು ಯೋಜನೆ ಬೇಕು. ಆದರೆ ಈಗೇನಾಗಿದೆ ?
ಕಳೆದ ಅಕ್ಟೋಬರ್ ತನಕ ಬಳ್ಳಾರಿಯಂತಹ ಜಿಲ್ಲೆಯಲ್ಲಿ ಯೋಜನೆಗೆ ಮೀಸಲಾಗಿರುವ ೧೮ ಕೋಟಿ ರೂ.ಗಳ ಪೈಕಿ ೧೫ ಕೋಟಿ ರೂಪಾಯಿ ಖರ್ಚಾಗಿದೆ. ದಕ್ಷಿಣ ಕನ್ನಡ, ಉಡುಪಿ ಮುಂತಾದ ಕಡೆ ರೂಪಾಯಿ ಖರ್ಚಾಗಿಲ್ಲ. ಕೆಲವು ಕಡೆ ರಾಮ, ದೂಮ ಚೋಮ ಅಂತ ಯಾರ್‍ಯಾರದ್ದೋ ಹೆಸರಿನಲ್ಲಿ ಗ್ರಾಮಪಂಚಾಯಿತಿಯ ಪಿಆರ್‌ಐ, ಮೇಸ್ತ್ರಿ ಅಥವಾ ಮಧ್ಯವರ್ತಿಗಳು, ಬ್ಲಾಕ್ ಲೆವೆಲ್‌ನ ಕಾರ್ಯಕ್ರಮ ಅಕಾರಿ ಹಾಗೂ ಅವರನ್ನು ಚೆಕ್ ಮಾಡಬೇಕಿದ್ದ ಪ್ರತಿನಿಗಳು ತಿನ್ನುತ್ತಿದ್ದಾರೆ.
ವಿಪರ್ಯಾಸ ಏನೆಂದರೆ ಕೆಲವೆಡೆ ಇದು ಸರಕಾರಿ ಕೆಲಸ ಅಂತ ಭಾವಿಸಿಕೊಂಡು ಲೋಕೋಪಯೋಗಿ ಇಲಾಖೆಯ ಕೆಲಸಗಳಲ್ಲಿ ನಿರತರಾಗುವ ಮಂದಿ, ಕೃಷಿ ಚಟುವಟಿಕೆಯಲ್ಲಿ ಪ್ರೆಸ್ಟೀಜು ಕಡಿಮೆ ಎಂದು ಹಿಂದೇಟು ಹಾಕುತ್ತಾರೆ. ಯಾವುದಾದರೂ ಕಂಪನಿಗೆ ಸಿಕ್ಕಾಪಟ್ಟೆ ಬ್ರ್ಯಾಂಡ್ ನೇಮ್ ಇದ್ದಲ್ಲಿ ಸಂಬಳ ಕಡಿಮೆ ಇದ್ದರೂ ಹೋಗುತ್ತಾರಲ್ವಾ ಹಾಗೆ ! ಇರಲಿ. ನೋವಿನ ಸಂಗತಿ ಏನೆಂದರೆ ನೂರಾರು ಊರುಗಳಲ್ಲಿ ತೀರಾ ಅಗತ್ಯ ಇದ್ದರೂ, ಇಂತಹದೊಂದು ಕಾರ್ಯಕ್ರಮ ಇದೆ ಎಂಬುದೇ ಯಾರಿಗೂ ಗೊತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ,, ಅಂತ ಯಾವುದೇ ರಾಜ್ಯದಲ್ಲಿ ಯೋಜನೆಗಿಂತ ಅದರಲ್ಲಿ ನಡೆದಿರುವ ಅವ್ಯವಹಾರದ್ದೇ ಸುದ್ದಿ.
ರಾಜ್ಯದಲ್ಲಿ ಎನ್‌ಆರ್‌ಇಜಿಎಸ್‌ನಲ್ಲಿ ೫೮,೬೦೦ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅದರಲ್ಲಿ ಎಷ್ಟು ಖೊಟ್ಟಿ ಅಂತ ತಿಳಿಸಿಲ್ಲ. ಆಗಸ್ಟ್ ವೇಳೆಗೆ ಗ್ರಾಮೀಣ ಕರ್ನಾಟಕದ ೩೧ ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿವೆ. ಆದರೆ ಎಷ್ಟು ಮಂದಿಗೆ ವೇತನ ನೀಡಲಾಗಿದೆ ಎಂಬ ವಿವರ ಸಿಗುವುದಿಲ್ಲ. ವೇತನವನ್ನು ಬ್ಯಾಂಕ್ ಮೂಲಕ ಬಟವಾಡೆ ಮಾಡಿದರೆ ಸಾಲದು ಮುಖ್ಯಮಂತ್ರಿಯವರೇ, ನೀಡುವ ವೇತನ ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿರಬೇಕು. ಪುತ್ತೂರಿನಲ್ಲಿ ದಿನಕ್ಕೆ ೮೨ ರೂಪಾಯಿ ಕೊಡುತ್ತೇವೆ ಅಂದರೆ ಸ್ವಂತ ಬುದ್ದಿ ಇರುವ ಯಾರೊಬ್ಬರೂ ಒಪ್ಪಲಾರರು.
ದೇಶಾದ್ಯಂತ ಬಡ ಕಾರ್ಮಿಕರಿಗೆ ವರ್ಷಕ್ಕೆ ನೂರು ದಿನ ಉದ್ಯೋಗ ಖಾತರಿಯನ್ನು ಕೊಟ್ಟು ನೆರವಾಗುವುದು ಈ ಯೋಜನೆಯ ಉದ್ದೇಶ. ಆದರೆ ಹೆಬ್ಬೆಟ್ಟು ಒತ್ತುವವರನ್ನು ವಂಚಿಸುವುದು ಸುಲಭ. ಆಂಧ್ರಪ್ರದೇಶದ ಅನಂತಪುರದಲ್ಲಿ ಜಮೀನ್ದಾರರು ತಮ್ಮ ಹೊಲದಲ್ಲಿ ಇವರನ್ನು ದುಡಿಸಿ ಯೋಜನೆಯ ನೆರವನ್ನು ನುಂಗಿದ್ದಾರೆ. ಪ್ರತಿ ವರ್ಷ ಕುಟುಂಬಕ್ಕೆ ೧೦೦ ದಿನ ಉದ್ಯೋಗ ಖಾತ್ರಿ ಎಂಬುದು ಯೋಜನೆಯ ಸೂತ್ರ. ಒಂದೇ ಜಾಬ್ ಕಾರ್ಡ್‌ನ್ನು ಕುಟುಂಬದ ಇತರ ಸದಸ್ಯರೂ ಬಳಸಬಹುದು. ಆದರೆ ಕಾಸರಗೋಡಿನ ನೀರ್ಚಾಲಿನಲ್ಲಿ ಯೋಜನೆಯನ್ವಯ ಕೆಲಸ ಮಾಡಿಸಿದ ನಂತರ ನಡೆದ ಕತೆಯೇ ಬೇರೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕಾರ್ಮಿಕರು ಕೆಲಸ ಮಾಡಿದ್ದಾರೆ ಎಂಬ ನೆಪ ಒಡ್ಡಿ ಯಾರಿಗೂ ನಿಗದಿತ ವೇತನ ಕೊಡದೆ ಕೈ ತೊಳೆದರು.
ನಿಜಕ್ಕೂ ಉಪಯೋಗವಾಗಬೇಕಿದ್ದರೆ ಮೊದಲು ಉದ್ಯೋಗ ಖಾತರಿಯಲ್ಲಿರುವ ವೇತನ ಪದ್ಧತಿಯನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿಗದಿಪಡಿಸಬೇಕು. ಎರಡನೆಯದಾಗಿ ಕಾಮಗಾರಿ ಮುಕ್ತಾಯವಾದ ಕೂಡಲೇ ಸಂಬಳ ಕೊಡಬೇಕು. ಕೊಡದೆ ತಿಂಗಳುಗಟ್ಟಲೆ ಸತಾಯಿಸಕೂಡದು. ಕಾಯಿದೆಯ ಪ್ರಕಾರ ಅದೂ ಅಪರಾಧವೇ. ಅವ್ಯವಹಾರ ನಡೆಯುತ್ತಿದ್ದಲ್ಲಿ ಅಥವಾ ಕೈಲಾಗದ ಸಿಬ್ಬಂದಿ ಇದ್ದಲ್ಲಿ ಮಾತ್ರ ಇಂತಹ ಯಡವಟ್ಟು ನಡೆಯುತ್ತದೆ. ಮೂರನೆಯದಾಗಿ ನೂರು ದಿನಗಳಲ್ಲಿ ರಸ್ತೆ ಅಗೆಯುವುದು, ಹೊಂಡ ತೋಡುವುದು, ಚರಂಡಿ ನಿರ್ಮಿಸುವುದು ಮಾತ್ರ ಕೆಲಸವಲ್ಲ. ಕೃಷಿ ಚಟುವಟಿಕೆಗೆ ಒತ್ತು ನೀಡಬೇಕಿದ್ದ ಸಂದರ್ಭ ಕಾರ್ಮಿಕರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ರೈತರು ಕೊಯ್ಲಿಗೆ ಜನ ಸಿಗುತ್ತಿಲ್ಲ ಅಂತ ಪರದಾಡುವಾಗ ಉದ್ಯೋಗ ಖಾತರಿ ಅಂತ ರಸ್ತೆ ಅಗೆಸುತ್ತ ದಿನ ಕಳೆಯಕೂಡದು. ನಿಜವಾಗಿಯೂ ಕೆಲಸ ನಡೆಯುತ್ತಿದೆಯೇ ಇಲ್ಲವೇ ಹಾಗೂ ಯಾವ ಹಂತದಲ್ಲಿದೆ ಎಂಬುದನ್ನು ವಿಡಿಯೊ ಮೂಲಕ ದಾಖಲಿಸಬೇಕು ಅಂತ ಸಿಎಂ ಸಲಹೆ ನೀಡಿದ್ದಾರೆ. ಆದರೆ ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಕೂಲಿ ಸಿಗುವಂತೆ ನಿಗಾ ವಹಿಸಬೇಕಾದ್ದು ಅದಕ್ಕಿಂತ ಮುಖ್ಯವಲ್ಲವೇ.
ಮಾನ್ಯ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರೇ, ಎನ್‌ಆರ್‌ಇಜಿಯ ದಕ್ಷಿಣ ಭಾರತ ವಿಭಾಗದ ಸಮ್ಮೇಳನದಲ್ಲಿ ಉದ್ಯೋಗ ಖಾತರಿಯ ವೈಫಲ್ಯವನ್ನು ಬಣ್ಣಿಸಿದ್ದೀರಿ. ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಅಗತ್ಯವನ್ನು ತಿಳಿಸಿದ್ದೀರಿ. ಆದರೆ ಸೋಲನ್ನು ಗೆಲುವಾಗಿ ಪರಿವರ್ತಿಸಬೇಕಾದ್ದು ಯಾರ ಹೊಣೆ ? ನಿಮ್ಮ ಸರಕಾರದ್ದಲ್ಲವೇ ? ಪಂಚಾಯತ್ ರಾಜ್ ವ್ಯವಸ್ಥೆಯದ್ದಲ್ಲವೇ ? ಅದನ್ನೆಲ್ಲ ಬಿಟ್ಟು ಅಮ್ಮಾ.. ನಾ ಫೇಲಾದೆ..ವರ್ತನೆ ತೋರುವುದೇ ?
ವರ್ಷಕ್ಕೆ ೪೦ ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯ ವಿನ್ಯಾಸವನ್ನು ಬೆಲ್ಜಿಯಂ ಮೂಲದ ಆರ್ಥಿಕ ತಜ್ಞ ಜಿಯಾನ್ ಡ್ರೆಜ್ ಸಿದ್ಧಪಡಿಸಿದ ಎಂದ ಮಾತ್ರಕ್ಕೇ ಎಲ್ಲವೂ ಸರಿಯಿರುವುದಿಲ್ಲ. ಪ್ರತಿ ದಿನ ೮೨ ರೂ.ನಂತೆ ೧೦೦ ದಿನ ಕೊಟ್ಟರೆ ಪ್ರತಿ ತಿಂಗಳ ಲೆಕ್ಕದಲ್ಲಿ ಸುಮಾರು ೬೮೩ ರೂ ಆಗುತ್ತದೆ. ಇದು ಬಡತನ ದೂರ ಮಾಡುತ್ತದೆ ಎನ್ನುವುದು ಅವಿವೇಕದ ಮಾತು ಅಲ್ವಾ ಠಾಕೂರರೇ. ಅಷ್ಟಕ್ಕೂ ಉದ್ಯೋಗ ಖಾತರಿಯಲ್ಲಿ ಸಿಗುವ ಕೂಲಿಗಿಂತ ಇಮ್ಮಡಿ ಮೊತ್ತ ( ತಿಂಡಿ-ಊಟ ಹೊರತಾಗಿ) ತಮ್ಮದೇ ಗ್ರಾಮದಲ್ಲಿ ಸಿಕ್ಕಿದರೆ ಈ ಯೋಜನೆಯನ್ನು ಯಾವ ಸೀಮೆಯ ಜನ ಕೇಳ್ತಾರೆ ಮಾರಾಯ್ರೇ ?
ಇನ್ನು ಎನ್‌ಆರ್‌ಇಜಿಇ ಮೂಲಕ ರಸ್ತೆ ನಿರ್ಮಾಣ, ಬಾವಿ, ಚರಂಡಿ ನಿರ್ಮಾಣದಂತಹ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇವುಗಳನ್ನು ವರ್ಷದ ಯಾವುದೇ ಸಂದರ್ಭದಲ್ಲಿ ಕೈಗೊಳ್ಳಬಹುದು. ಎಷ್ಟೋ ಕಡೆಗಳಲ್ಲಿ ಇಂತಹ ಕೆಲಸಗಳಿಗೆ ಕೃಷಿ ಕಾರ್ಮಿಕರು ತೆರಳುವುದರಿಂದ ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ಒಬ್ಬರೂ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಒರಿಸ್ಸಾ, ಜಾರ್ಖಂಡ್ ಉತ್ತರಪ್ರದೇಶದಂತಹ ರಾಜ್ಯಗಳ ಕತೆ ಕೇಳದಿರುವುದು ಲೇಸು. ಎನ್‌ಆರ್‌ಇಜಿಎ ಉದ್ಯೋಗದ ಕಾರ್ಡ್ ಪಡೆಯಲು ಲಂಚ ಕೊಡುವ ಪರಿಸ್ಥಿತಿ. ಊಳಿಗಮಾನ್ಯ ಪದ್ಧತಿಯಡಿಯಲ್ಲಿ ನರಳುವ ಅಲ್ಲಿನ ಗ್ರಾಮಗಳಲ್ಲ್ಲಿ ಬಡಪಾಯಿ ಕಾರ್ಮಿಕರಿಗೆ ಉದ್ಯೋಗ ಖಾತರಿ ನೀಡುವರಿಲ್ಲ.
ಅಂದಹಾಗೆ ಉದ್ಯೋಗ ಖಾತರಿ ಕಾಯಿದೆಯನ್ನು ಓದುವಾಗ ತುಂಬ ಸಂತಸವಾಗಬಹುದು. ವೇತನವನ್ನು ದಿನಗೂಲಿ ದರದಲ್ಲಿ ನೀಡಬೇಕು. ಸಂಬಳ ಬಟವಾಡೆಯನ್ನು ವಾರದ ಲೆಕ್ಕದಲ್ಲಿ ವಿತರಿಸಬೇಕು. ಯಾವುದೇ ಕಾರಣಕ್ಕೂ ೧೫ ದಿನದಿಂದ ಹೆಚ್ಚು ತಡ ಮಾಡಬಾರದು. ಫಲಾನುಭವಿಗಳ ಪೈಕಿ ಮೂರನೇ ಒಂದರಷ್ಟು ಮಂದಿ ಮಹಿಳೆಯರಿರಬೇಕು. ಕೆಲಸದ ಸ್ಥಳದಲ್ಲಿ ಬಿಸಿಲು, ಮಳೆಯಿಂದ ರಕ್ಷಣೆಗೆ ತಂಗುದಾಣ ಅಥವಾ ಆಶ್ರಯ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಅನುಕೂಲ ಕೊಡಬೇಕು. ಕನಿಷ್ಠ ಶೇ.೫೦ರಷ್ಟು ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಬೇಕು. ಜಲ ಸಂವರ್ಧನೆ, ಭೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. (ಎಲ್ಲಾದರೂ ಇವರಿಗೆ ಗಿಡ ನೆಡಲು ಕೆಲಸ ಕೊಟ್ಟಿದ್ದನ್ನು ನೋಡಿದ್ದೀರಾ ?) ಗುತ್ತಿಗೆದಾರರು ಮತ್ತು ಯಂತ್ರೋಪಕರಣಗಳಿಗೆ ಅವಕಾಶ ಇಲ್ಲ. ಗ್ರಾಮಸಭೆಯ ಮೂಲಕ ನಿಯಮಿತವಾಗಿ ಕಾಮಗಾರಿ ಕುರಿತ ಲೆಕ್ಕ ಪರಿಶೋಧನೆ ನಡೆಸಬೇಕು. ಯೋಜನೆ ಕುರಿತ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು.
ಯಾವುದೇ ವಿಶೇಷ ಕೌಶಲ್ಯದ ಅಗತ್ಯ ಬೀಳದ ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಕುಟುಂಬದಿಂದ ಬಂದ ವ್ಯಕ್ತಿ ಭಾಗವಹಿಸಬಹುದು. ಇದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಲಿಖಿತ ಇಲ್ಲವೇ ಮೌಖಿಕವಾಗಿ ತಿಳಿಸಿ ಹೆಸರು ನೋಂದಣಿ ಮಾಡಿದರೆ ಸಾಕು. ತಪಾಸಣೆಯ ನಂತರ ಗ್ರಾಮ ಪಂಚಾಯಿತಿ ಗುರುತಿನ ಚೀಟಿಯನ್ನು ನೀಡುತ್ತದೆ. ಇದಕ್ಕೆ ಯಾವುದೇ ಶುಲ್ಕ ನೀಡಬೇಕಿಲ್ಲ. ಅರ್ಜಿ ಸಲ್ಲಿಸಿದ ೧೫ ದಿನದೊಳಗೆ ಜಾಬ್ ಕಾರ್ಡ್ ನೀಡಬೇಕು. ತನಗೆ ಎಷ್ಟು ದಿನ ಕೆಲಸ ಮಾಡುವ ಇಚ್ಛೆ ಇದೆ ಎಂದು ವ್ಯಕ್ತಿ ಅರ್ಜಿಯಲ್ಲಿ ತಿಳಿಸಬೇಕು. ಕನಿಷ್ಠ ೧೪ ದಿನ ಕೆಲಸ ಮಾಡಬಹುದು. ನಂತರ ಬೇಕಾದರೆ ಬಿಡಬಹುದು. ಅರ್ಜಿ ಓ.ಕೆ ಆದ ನಂತರ ಗ್ರಾಮಪಂಚಾಯಿತಿ ಖಾತರಿಯ ರಶೀದಿ ನೀಡಬೇಕು. ಅರ್ಜಿ ಅನುಮೋದನೆಯಾದ ೧೫ ದಿನಗಳೊಳಗೆ ಕೆಲಸ ಕೊಡಬೇಕು. ಇಲ್ಲವಾದಲ್ಲಿ ಅರ್ಜಿದಾರನಿಗೆ ಸರಕಾರ ಕಾಯಿದೆಯ ಪ್ರಕಾರ ನಿರುದ್ಯೋಗ ಭತ್ಯೆಯನ್ನು ಕೊಡಬೇಕು. ಗ್ರಾಮದ ೫ ಕಿ.ಮೀ ವ್ಯಾಪ್ತಿಯಲ್ಲಿ ಉದ್ಯೋಗ ಕೊಡಬೇಕು. ಅದಕ್ಕಿಂತ ಆಚೆಗೆ ಇದ್ದಲ್ಲಿ ಶೇ.೧೦ರಷ್ಟು ಹೆಚ್ಚುವರಿ ವೇತನ ನೀಡಬೇಕು. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಬೇಕು. ಕೆಲಸ ಕೂಡಾ.
ಉದ್ಯೋಗ ಖಾತರಿ ಯೋಜನೆ ಶಾಸನ ಬದ್ಧ ರೀತಿಯಲ್ಲಿ ಗ್ಯಾರಂಟಿಯಾಗಿ ಉದ್ಯೋಗ ಕೊಡುತ್ತದೆ. ಹಕ್ಕಿನಂತೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವುದು, ಜಾಬ್ ಕಾರ್ಡ್ ಪಡೆಯುವುದು, ತನಗೆ ಬೇಕಾದಷ್ಟು ದಿನ ಕೆಲಸ ಮಾಡುವುದು ಮತ್ತು ಸಂಬಳ ಪಡೆಯುವುದು ! ಎಲ್ಲ ಚೆನ್ನಾಗಿದೆ.
ಹಾಗಾದರೆ ಇದಕ್ಕೆಲ್ಲ ಹೊಣೆ ಯಾರು ?
ಗ್ರಾಮಸಭೆ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ್, ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾವೆಲ್ಲ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ಗ್ರಾಮಸಭೆ ನಿರ್ಧರಿಸಬೇಕು.
ಗ್ರಾಮೀಣ ಮಟ್ಟದಲ್ಲಿ ಯೋಜನೆಯ ಅನುಷ್ಠಾನ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯೇ ಆಧಾರ ಸ್ಥಂಭ. ಕಾಮಗಾರಿಯ ನೀಲನಕ್ಷೆ, ಅರ್ಜಿ ಸ್ವೀಕಾರ, ಅರ್ಜಿಗಳ ಪರಿಶೀಲನೆ, ನೋಂದಣಿ, ಜಾಬ್ ಕಾರ್ಡ್ ವಿತರಣೆ, ರಶೀದಿ ವಿತರಣೆ, ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಉದ್ಯೋಗ, ಕಾಮಗಾರಿಯ ನಿರ್ವಹಣೆ, ದಾಖಲೆಗಳ ನಿರ್ವಹಣೆ, ಯೋಜನೆ ಸಂಬಂಧ ಗ್ರಾಮಸಭೆ, ಹೊಣೆ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಗ್ರಾಮ ಮಟ್ಟದಲ್ಲಿ ಕಾಮಗಾರಿಯ ಉಸ್ತುವಾರಿ ಕೂಡ ಗ್ರಾಮ ಪಂಚಾಯಿತಿಗೆ ಸೇರುತ್ತದೆ.
ಇನ್ನು ಬ್ಲಾಕ್ ಮಟ್ಟದಲ್ಲಿ ಪ್ರೋಗ್ರಾಮ್ ಆಫೀಸರ್ (ಪಿ.ಒ) ಸಮನ್ವಯಕಾರನಾಗಿ ಕಾರ್‍ಯನಿರ್ವಹಿಸಬೇಕು. ಅರ್ಜಿ ಸಲ್ಲಿಸಿದ ವ್ಯಕ್ತಿಗೆ ೧೫ ದಿವಸದೊಳಗೆ ಕೆಲಸ ಸಿಕ್ಕಿತೇ ಅಂತ ಈ ಅಕಾರಿ ಖಚಿತಪಡಿಸಿಕೊಳ್ಳಬೇಕು. ಕಾಮಗಾರಿಯ ಅಭಿವೃದ್ಧಿಯನ್ನು ತಪಾಸಣೆ ಮಾಡಬೇಕು. ದೂರು ದುಮ್ಮಾನಗಳನ್ನು ಆಲಿಸಿ ಇತ್ಯರ್ಥಪಡಿಸಬೇಕು. ಲೆಕ್ಕ ಸರಿಯಾಗಿದೆಯೇ ಅಂತ ಪರಿಶೀಲಿಸಬೇಕು. ತಪ್ಪಿದಲ್ಲಿ ಬ್ಲಾಕ್ ಮಟ್ಟದಲ್ಲಿ ಆತನೇ ಹೊಣೆಗಾರನಾಗುತ್ತಾನೆ.
ಮತ್ತೆ ಉದ್ಯೋಗ ಖಾತರಿಯ ಜಿಲ್ಲಾ ಯೋಜನೆಗಳನ್ನು ನಿರ್ವಹಿಸುವ ಹೊಣೆ ಜಿಲ್ಲಾ ಪಂಚಾಯತ್‌ಗೆ ಸೇರಿದೆ. ಕಾರ್ಮಿಕ ಬಜೆಟ್ ಮತ್ತು ಜಿಲ್ಲೆಯಲ್ಲಿ ಯೋಜನೆಯ ಉಸ್ತುವಾರಿ ಅದಕ್ಕಿರುತ್ತದೆ. ಯೋಜನೆಯ ಮಾಹಿತಿ ಪ್ರಚಾರ, ತರಬೇತಿ, ಬ್ಲಾಕ್ ಯೋಜನೆಗಳನ್ನು ಜಿಲ್ಲಾ ಮಟ್ಟದ ಯೋಜನೆಗಳಾಗಿ ಪರಿವರ್ತನೆ, ನಿ ಬಿಡುಗಡೆ ಮತ್ತು ಬಳಕೆ,ಮಾಸಿಕ ಪ್ರಗತಿಯ ವಿವರ ಸಲ್ಲಿಕೆ ಜಿ.ಪಂ. ಯೋಜನಾ ಸಮನ್ವಯಕಾರನ ಹೊಣೆ.
ರಾಜ್ಯ ಉದ್ಯೋಗ ಖಾತರಿ ಮಂಡಳಿ (ಎಸ್‌ಇಜಿಸಿ) ರಾಜ್ಯ ಸರಕಾರಕ್ಕೆ ಯೋಜನೆಗೆ ಸಂಬಂಸಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತದೆ. ಪರಿಶೀಲನೆಯ ಜವಾಬ್ದಾರಿಯೂ ಇದಕ್ಕಿದೆ. ರಾಜ್ಯದಲ್ಲಿ ಯೋಜನೆಯ ವಾರ್ಷಿಕ ಪ್ರಗತಿ ವರದಿಯನ್ನು ಸಿದ್ಧಪಡಿಸುವುದು ಕೂಡ ಇದರ ಜವಾಬ್ದಾರಿ. ಉದ್ಯೋಗ ಖಾತರಿ ನಿಯ ಸ್ಥಾಪನೆ, ಪೂರ್ಣಕಾಲಿಕ ಸಿಬ್ಬಂದಿ ನೇಮಕ (ಮುಖ್ಯವಾಗಿ ಗ್ರಾಮ ಪಂಚಾಯತಿ ಸಹಾಯಕ, ಪ್ರೋಗ್ರಾಮ್ ಆಫೀಸರ್, ತಾಂತ್ರಿಕ ಸಿಬ್ಬಂದಿ ನೇಮಕ ), ರಾಜ್ಯದ ಪಾಲಿನ ಬಜೆಟ್ ಬಿಡುಗಡೆ, ತರಬೇತಿ, ಗುಣಮಟ್ಟ ಕಾಪಾಡಲು ನೆರವು, ನಿಯಮಿತ ಪರಿಶೀಲನೆ,ಯೋಜನೆಯ ಎಲ್ಲಾ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಹೊಣೆ ರಾಜ್ಯ ಸರಕಾರದ್ದು.
ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಕೇಂದ್ರ ಮಂಡಳಿ ಕಾರ್ಯನಿರ್ವಹಿಸುತ್ತದೆ. ಯೋಜನೆಗೆ ಸಂಬಂಸಿ ರಾಜ್ಯ ಸರಕಾರಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು, ಸಂಸತ್ತಿನಲ್ಲಿ ಮಂಡಿಸಬೇಕಾದ ವರದಿಯ ಸಿದ್ಧತೆ, ಸಕಾಲದಲ್ಲಿ ರಾಜ್ಯಗಳಿಗೆ ಅನುದಾನ ಒದಗಿಸುವುದು, ಅನುಷ್ಠಾನದ ಪರಿಶೀಲನೆ, ಅಂಕಿ ಅಂಶಗಳ ದಾಖಲು, ಮಾಹಿತಿ ತಂತ್ರeನದ ಬಳಕೆ, ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಹೊಣೆ ಹೀಗೆ ನಾನಾ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಲಾಗಿದೆ.
ಉತ್ತರ ಪ್ರದೇಶ ಸರಕಾರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಜತ್ರೋಪ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ವೇತನ ವಿತರಣೆಗೆ ಸ್ಮಾರ್ಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಇಲ್ಲಿಯತನಕ ೮೭ ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿದ್ದಾರೆ. ಈ ಸಂಖ್ಯೆ ೨.೬ ಲಕ್ಷ ದಾಟುವ ನಿರೀಕ್ಷೆ ಇದೆ. ಇರಲಿ.
ಆದರೆ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತದ ಜತೆ ದೇಶ ಸುದೀರ್ಘಾವಯಿಂದ ಸೆಣಸುತ್ತಿದೆ...
ಮತ್ತದೇ ರಾಜಕೀಯದ ಲಾಭ ನಷ್ಟದ್ದೇ ಲೆಕ್ಕಾಚಾರ. ಯುಪಿಎ ಸರಕಾರದ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯನ್ನು ಮತಗಳಾಗಿ ಪರಿವರ್ತಿಸಲು ವಿಫಲವಾಗದಿರುವುದೂ ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ಕಾರಣಗಳಲ್ಲೊಂದು ಅಂತ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕರು ಹಳಹಳಿಯುತ್ತಿದ್ದಾರೆ.
ಆದರೆ ಅಂತಿಮವಾಗಿ ಸಾಮಾನ್ಯ ಪ್ರಜೆ ಕೇಳುವುದಿಷ್ಟೇ. ಕೆಲಸ ಮಾಡಿದ್ದಕ್ಕೆ ತಕ್ಕ ನ್ಯಾಯ ಕೊಡಿ. ಕನಿಷ್ಠ ಸಂಬಳವನ್ನು ಸರಿಯಾಗಿ ಕೊಟ್ಟು ಪುಣ್ಯ ಕಟ್ಟಿ ಕೊಳ್ಳಿ

No comments:

Post a Comment