ಹಳ್ಳಿಯ ಜನ ಶ್ಯಾಂಪೂ, ಸೋಪು, ಬಿಸ್ಕತ್ತು, ಟೂತ್ ಪೌಡರ‍್, ಮುಂತಾದವುಗಳನ್ನು ಬಳಸುತ್ತಾರೆ. ಆದರೆ ಅದು ಸ್ಯಾಶೆಯ ರೂಪದಲ್ಲಿರುವುದೇ ಹೆಚ್ಚು. ಆದ್ದರಿಂದ ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಗಳಲ್ಲಿ ಸ್ಯಾಶೆಯಲ್ಲಿರುವ (sachet) ತೆಂಗಿನೆಣ್ಣೆ, ಟೂತ್ ಪೇಸ್ಟ್, ಫೇರ‍್ ಎಂಡ್ ಲವ್ಲಿ, ಸಣ್ಣ ಬಿಸ್ಕತ್ತಿನ ಪ್ಯಾಕೇಟ್ ಸಿಕ್ಕೇ ಸಿಗುತ್ತದೆ. ಬ್ರಿಟಾನಿಯಾ ಟೈಗರ‍್ ನ ಪುಟ್ಟ ಪೊಟ್ಟಣಗಳಲ್ಲಿ ಕೇವಲ ಮೂರು ಪೀಸ್ ಬಿಸ್ಕತ್ ಇರುತ್ತದೆ. ೧ ರೂ ಕಾಯಿನ್ ಬಾಕ್ಸ್ ಇರುತ್ತೆ. ೧೦ ರೂ.ಗಳ ಟಾಪ್ ಅಪ್ ಸಿಗುತ್ತದೆ. ಚೋಟಾ ಪೆಪ್ಸಿ ಇರುತ್ತೆ. ಒಟ್ಟಾರೆ ಹಳ್ಳಿಯ ಮಾರುಕಟ್ಟೆ ಎಂದರೆ ಮಿನಿಯೇಚರ‍್ ಜಗತ್ತು. ಯಾಕೆ ಹೀಗೆ ? ಅಲ್ಲಿನ ಖರ್ಚಿನ ಸಾಮರ್ಥ್ಯ ಅಷ್ಟೇ ಆಗಿರುತ್ತದೆ.ಅನೇಕ ಬಳಕೆಯ ವಸ್ತುಗಳು ಒಂದು ದಿನ ಅಥವಾ ವಾರದಮಟ್ಟಿಗೆ ಬೇಕಾಗುತ್ತದೆ. ಅವರಲ್ಲಿ ಬಹಳ ಮಂದಿಗೆ ಕೂಲಿ ದಿನಗೂಲಿ ಇಲ್ಲವೇ ವಾರಕ್ಕೊಮ್ಮೆ. ಇನ್ನು ಕೆಲವರಿಗೆ ಎರಡು ವಾರಕ್ಕೊಮ್ಮೆ. ಆದ್ದರಿಂದ ಅವರಿಗೆ ಒಟ್ಟಿಗೇ ಹೆಚ್ಚು ಖರ್ಚಿನ ಉತ್ಪನ್ನಗಳನ್ನು ಖರೀದಿಸಲು ಆಗುವುದಿಲ್ಲ. ಅವರ ಬಜೆಟ್ ವಾರದ ಲೆಕ್ಕದಲ್ಲಿ ಇರುತ್ತದೆ. ವಾರದಿಂದಾಚೆಗೆ ಅವರ ಬಜೆಟ್ ಲೆಕ್ಕಾಚಾರ ಹೋಗುವುದಿಲ್ಲ.
ಇತ್ತೀಚೆಗೆ ಬೆಂಗಳೂರಿಗೆ ಸಮೀಪದ ಹಳ್ಳಿಯೊಂದಕ್ಕೆ ಹೋಗಿದ್ದೆ. ರೈತಾಪಿಯೊಬ್ಬ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ಹೋಗಿ ಮಾತನಾಡಿಸುವ ಎಂದು ಅನ್ನಿಸಿತು. ಸರಿ, ಸ್ಕೂಟರನ್ನು ರಸ್ತೆ ಬದಿಯ ಮರದ ನೆರಳಲ್ಲಿ ನಿಲ್ಲಿಸಿದೆ. ಹೊಲದ ಬದುವಿನಲ್ಲಿ ನಡೆದು ಆತನತ್ತ ನಡೆದೆ. ನನ್ನನ್ನೇ ಆತ ಯಾರಪ್ಪಾ ಅಂತ ನೋಡುತ್ತಿದ್ದ. ಆತನೂ ಯುವಕ. ಹತ್ತಿರ ಹೋಗಿ ನನ್ನ ಪರಿಚಯ ಮಾಡಿಸಿದೆ. ನಿಮ್ಮೂರಿನ ವಿಶೇಷ ಹೇಳಿ, ಬೆಳೆಯ ಬಗ್ಗೆ ನಾಲ್ಕು ಮಾತಾಡಿ ಎಂದೆ. ಆಗ ಶುರುವಾಯಿತು ಗ್ರಾಮಾಯಣ. ಗ್ರಾಮವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ತನ್ನದೇ ಶೈಲಿಯಲ್ಲಿ ಉಸುರಿದ. ಎಲ್ಲವನ್ನೂ ಕೇಳಿಸಿಕೊಂಡೆ. ಕೊನೆಗೆ ಕುತೂಹಲಕ್ಕಾಗಿ ಪತ್ರಕರ್ತರ ಬಗ್ಗೆ ಊರಿನವರ ಅಭಿಪ್ರಾಯ ಏನು ಎಂದೆ ? ಆತ ಏನು ಹೇಳಿದ ಗೊತ್ತೇ ?
ಅಯ್ಯೋ, ನೀನು ಹೇಳ್ತೀಯಾ, ಅವನು ಬರೀತಾನೆ.. ಅವನಿಗೆ ಸಂಬಳ ಬರತದೆ. ಬರೀತಾನೆ..ಹೋಗ್ತಾನೆ..ಅಷ್ಟೇ..ಏನಾಗ್ತದೆ ಮತ್ತ ? ಅಂತಾರೆ ಎಂದ.

No comments:
Post a Comment