Thursday 27 August 2009

ಬಾಲ್ಯದ ಛದ್ಮವೇಷ ಮತ್ತು ಇತರ ಪಠ್ಯೇತರ ಚಟುವಟಿಕೆಗಳು

ಕಳತ್ತೂರಿನ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ನಾನು ಒಂದರಿಂದ ಏಳನೆಯ ತರಗತಿಯ ತನಕ ಓದಿದೆ. ನನ್ನ ಬಾಲ್ಯವನ್ನು ರೂಪಿಸಿದ ಶಾಲೆಯೂ ಇದುವೇ. ಈ ಶಾಲೆಯ ಕುರಿತ ಪ್ರೀತಿಯ ನೆನಪುಗಳು ಹಗಲಿರುಳೂ ಜಗ್ಗುತ್ತಿವೆ.
ಜೂನ್ ಒಂದರಂದು ಒಂದನೆಯ ತರಗತಿಗೆ ಸೇರಿದ ಮೊದಲ ದಿನ ಅನೇಕ ಮಕ್ಕಳು ಹೊಸ ವಾತಾವರಣವಾದ್ದರಿಂದ ಜೋರಾಗಿ ಅಳುತ್ತಿದ್ದವು. ಅಪ್ಪ ಅಮ್ಮಂದಿರು ತರಗತಿಗೆ ಬಿಟ್ಟು ಹೊರಟಾಗ ಮಕ್ಕಳು ರಚ್ಚೆ ಹಿಡಿದು ತಾರಕ ಸ್ವರದಲ್ಲಿ ಪ್ರತಿಭಟನೆ ಸಲ್ಲಿಸುತ್ತಿದ್ದುವು. ಆದರೆ ಕೆಲವು ಚಿಣ್ಣರು ಪಿಳಿ ಪಿಳಿ ಕಣ್ಣುಗಳಿಂದ ಎಲ್ಲವನ್ನೂ ಕುತೂಹಲ, ಆತಂಕ ಮತ್ತು ಮಾಸ್ತರರ ನಿರೀಕ್ಷೆಯೊಂದಿಗೆ ಕಾಲ ಕಳೆಯುತ್ತಿದ್ದುವು. ಕೆಲವರ ತಲೆಗೆ ಅವರ ಹೆತ್ತವರು ಮಳೆಗೆ ನೆನೆಯದಂತೆ ಉರುಟಾದ ಪ್ಲಾಸ್ಟಿಕ್ಕಿನ ಟೋಪಿಗಳನ್ನು ಹಾಕಿದ್ದರು. ಏಳನೆಯ ಕ್ಲಾಸಿನ ಹುಡುಗರು ನಮಗಾಗ ಬಹಳ ದೊಡ್ಡ ದಾಂಡಿಗರಂತೆ ಕಾಣುತ್ತಿದ್ದರು. ಅವರೆಲ್ಲ ನಿರಾತಂಕದಿಂದ ಓಡಾಡುತ್ತಿದ್ದುದನ್ನು ಕಂಡು ನಮಗೆಲ್ಲ ಅಚ್ಚರಿಯಾಗುತ್ತಿತ್ತು. ನಾನು ಅಳುತ್ತಿರಲಿಲ್ಲ. ಯಾಕೆಂದರೆ ಆ ಹೊತ್ತಿಗೆ ನನಗೆ ಶಾಲೆಯ ವಾತಾವರಣ ಒಗ್ಗಿ ಹೋಗಿತ್ತು. ಅಧಿಕೃತವಾಗಿ ಶಾಲೆಗೆ ಸೇರುವ ಹಿಂದಿನ ವರ್ಷ ಕೂಡ ಆಗಾಗ್ಗೆ ಶಾಲೆಗೆ ಹೋಗಿ ಒಂದನೆಯ ತರಗತಿಯಲ್ಲಿ ಆಸೀನನಾಗಿರುತ್ತಿದ್ದೆ. ಅದಕ್ಕೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅಧಿಕೃತವಾಗಿ ಶಾಲೆಗೆ ಸೇರಿದ ವರ್ಷ ಎರಡನೆಯ ತರಗತಿಗೆ ಹೋಗಿದ್ದ ವಿದ್ಯಾರ್ಥಿಗಳು ನನ್ನನ್ನು ಕಂಡು, ನೀನೂ ನಮ್ಮ ಜೊತೆ ಬರಬೇಕಿತ್ತು. ಕಳೆದ ವರ್ಷವಿಡೀ ಬಂದಿದ್ಯಲ್ಲ..ಎಂದು ಹೇಳುತ್ತಿದ್ದರು. ನಾನು ಮಾತ್ರ ಅದಕ್ಕೆಲ್ಲ ತಲೆ ಕೆಡಿಸುತ್ತಿರಲಿಲ್ಲ. ಸಂಜೀವ ಮಾಸ್ತರರು ನನಗೆ ಕ್ಲಾಸ್ ಟೀಚರ‍್ ಆಗಿದ್ದರು. ಅವರಿಗೂ ಮೊದಲು ರಾಜೇಶ್ವರಿ ಟೀಚರ‍್ ಸ್ವಲ್ಪ ದಿನ ಇದ್ದ ನೆನಪು. ಆದರೆ ಸಂಜೀವ ಮಾಸ್ತರರ ಪ್ರೀತಿ ನನ್ನ ಮಧುರ ನೆನಪಾಗಿ ಉಳಿದಿದೆ. ನನ್ನ ಸೋದರ ಮಾವ (ತಾಯಿಯ ತಮ್ಮ) ಶ್ಯಾಮ್ ಭಟ್‌ ಕೂಡ ಮಾಸ್ತರರಾಗಿದ್ದರು.
ಒಂದನೇ ತರಗತಿಯಲ್ಲಿದ್ದಾಗಲೊಮ್ಮೆ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನನಗೆ ಚಂದಾವೂರಿನ ದಾಸಯ್ಯನ ವೇಷವನ್ನು ಹಾಕಲಾಗಿತ್ತು. ನಾನು ದಾಸಯ್ಯ ಅಂತ ಪರಿಚಯ ಮಾಡಿಕೊಂಡು ಒಂದೆರಡು ಸಾಲುಗಳನ್ನು ಹಾಡಬೇಕಿತ್ತು. ಮನೆಯಲ್ಲಿ ಬಾಯಿಪಾಠ ಮಾಡಿಕೊಂಡು ಶಾಲೆಗೆ ಹೋದಾಗ ಅಲ್ಲಿ ನೂರಾರು ಮಕ್ಕಳು ಬಗೆ ಬಗೆಯ ಚಿತ್ರ ವಿಚಿತ್ರ ವೇಷಧಾರಿಗಳಾಗಿ ಸ್ಪರ್ಧೆಗೆ ರೆಡಿಯಾಗಿದ್ದರು. ಅವರನ್ನೆಲ್ಲ ಕಂಡಾಗ ನನಗೆ ದಂಗುಬಡಿದ ಅನುಭವ.
ನನ್ನ ಪರಮ ಮಿತ್ರ ವೆಂಕಟರಾಜ ಬಳಿ ಬಂದು ಮಾತನಾಡಿಸಿದಾಗ ನನಗೆ ದಿಗ್ಭ್ರಮೆಯಾಯ್ತು. ಅವನು ಶಿವನ ವೇಷ ಹಾಕಿದ್ದ ನೆನಪು. ಜಡೆ, ಕಮಂಡಲು , ರುದ್ರಾಕ್ಷಿ ಮಾಲೆ ಸಹಿತ ಮಾತನಾಡಿಸಿದಾಗ ನನಗೆ ವೇದಿಕೆಯಲ್ಲಿ ಹೇಳಬೇಕಿದ್ದ ಮಾತುಗಳೆಲ್ಲ ಕ್ಷಣಾರ್ಧದಲ್ಲಿ ಮರೆತು ಹೋಯಿತು. ರಣಾಂಗಣದಲ್ಲಿ ಕರ್ಣನಿಗೆ ಅಂತಿಮ ಕ್ಷಣದಲ್ಲಿ ಶಸ್ತ್ರಾಭ್ಯಾಸ ಮರೆತು ಹೋದಂತೆ ನನಗೂ ದಿಗಿಲಾಯಿತು. ರಾಜ, ನನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದೆ. ಪಾಪ, ಅವನಾದರೂ ಹೇಗೆ ಹೇಳಿಕೊಡುತ್ತಾನೆ ? ಕೇಳೊಣವೆಂದರೆ ಮಾವನಾಗಲಿ, ಮನೆಯವರಾಗಲಿ ಹತ್ತಿರ ಇರಲಿಲ್ಲ. ಸುತ್ತಮುತ್ತ ಎಲ್ಲ ಬ್ರಹ್ಮ, ವಿಷ್ಣು, ಶಿವ, ಭಗತ್ ಸಿಂಗ್, ಗಾಂಧೀಜಿ, ಅಜ್ಜ, ಅಜ್ಜಿ, ಭಿಕ್ಷುಕ, ನವಿಲು, ಕರಡಿ, ಸಿಂಹ, ಹುಲಿ ಮುಂತಾದ ವೇಷ ಧರಿಸಿದ ಮಕ್ಕಳು ಮತ್ತು ಅವರನ್ನು ಸ್ಪರ್ಧೆಗೆ ಅಣಿಗೊಳಿಸುತ್ತಿದ್ದ ಶಿಕ್ಷಕ ಶಿಕ್ಷಕಿಯರೇ. ಒಬ್ಬೊಬ್ಬರೇ ವೇದಿಕೆಗೆ ಬಂದು ನಾಲ್ಕು ಮಾತುಗಳನ್ನು ಆಡಿ ಪರದೆಯ ಹಿಂದೆ ಬರುತ್ತಿದ್ದಾಗ ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅಂತೂ ನನ್ನ ಸರದಿ ಬಂತು.
ಏನು ಮಾಡುವುದಂತ ಗೊತ್ತಾಗಲಿಲ್ಲ. ವೇಷ ಧರಿಸಿದ ತಪ್ಪಿಗೆ ವೇದಿಕೆಗೆ ಕಳಿಸಲ್ಪಟ್ಟೆ. ವೇದಿಕೆಯ ಎದುರಿನ ಜನರನ್ನು ಕಂಡಾಗ ತಬ್ಬಿಬ್ಬಾದೆ. ಅಲ್ಲೇ ಮಾವ ಸೇರಿದಂತೆ ಇತರ ಗುರುಗಳಿದ್ದರು. ಅವರಲ್ಲಿ ಕೆಲವರು ಮಾತನಾಡು..ಮಾತನಾಡು..ಎಂದು ಸೂಚಿಸದರು. ನನಗಂತೂ ಒಂದೇ ಒಂದು ವಾಕ್ಯ ನೆನಪಿಗೆ ಬರಲಿಲ್ಲ. ನಾನು ತಂಜಾವೂರಿನಿಂದ ಬಂದಿದ್ದೇನೆ..ಎಂಬ ಒಂದೇ ವಾಕ್ಯ ಹೇಗೋ ನೆನಪಾಯಿತು. ಅಷ್ಟನ್ನು ಹೇಳಿಕೊಂಡೆ. ನನ್ನ ಗಡಿಬಿಡಿಯನ್ನು ಅರಿತ ತೀರ್ಪುಗಾರರು ಆಯಿತಪ್ಪಾ..ನೀನಿನ್ನು ಹೋಗಬಹುದು ಎಂದು ಕಣ್ಣಲ್ಲೇ ತಿಳಿಸಿದರು. ನಾನು ಹಾಗೆಯೇ ಪರದೆಯ ಹಿಂದೆ ಸರಿದೆ. ಅದುವೇ ಕೊನೆ. ಮತ್ತೆ ಎಂದಿಗೂ ಛದ್ಮ ವೇಷ ಹಾಕಲಿಲ್ಲ. ಮುಂದಿನ ತರಗತಿಗಳಲ್ಲಿ ಕಂಠಪಾಠ, ಪ್ರಬಂಧ, ಚಿತ್ರ, ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಆರನೆಯ ತರಗತಿಯಲ್ಲಿ ವಿಜ್ಞಾನೋತ್ಸವದಲ್ಲಿ ಭಾಗವಹಿಸಿದೆ. ಜಿಲ್ಲಾ ಮಟ್ಟದ ತನಕ ಸ್ಪರ್ಧಿಸಿ ಎರಡನೆಯ ಬಹುಮಾನ ಗಳಿಸಿದೆ. ಏಳನೆಯ ತರಗತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದಲ್ಲಿಯೂ ಶಾಲೆಯನ್ನು ಪ್ರತಿನಿಧಿಸಿದ್ದೆ. ಕೋಯಿಕ್ಕೋಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನ ಗಳಿಸದಿದ್ದರೂ, ಅವಿಸ್ಮರಣೀಯ ಅನುಭವಗಳಂದಿಗೆ ಹಿಂತಿರುಗಿದ್ದೆ. ಅದಕ್ಕೆಲ್ಲ ಕಾರಣ ಆತ್ಮೀಯ ರಾಜೀವ ಮಾಸ್ತರ‍್. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಲು ಅವರಯ ನಡೆಸುತ್ತಿದ್ದ ಪ್ರಯತ್ನ ಹಲವು. ಪ್ರತಿ ಶನಿವಾರ (ರಜೆಯ ದಿನ) ಆಸಕ್ತ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಅರ್ಧ ದಿನ ಪೂರ್ತಿ ವಿಜ್ಞಾನದ ವಿಷಯಗಳನ್ನು ಕಲಿಸುತ್ತಿದ್ದರು. ದೇಶ ಮತ್ತು ಜಗತ್ತಿನ ವಿಜ್ಞಾನಿಗಳು, ಅವರು ಕಂಡುಹಿಡಿದ ಸಂಶೋಧನೆಗಳನ್ನು ಪರಿಚಯಿಸುತ್ತಿದ್ದರು. ಸಣ್ಣ ಪುಟ್ಟ ಪ್ರಯೋಗಗಳು, ರಸ ಪ್ರಶ್ನೆಯನ್ನು ನಡೆಸಿಕೊಡುತ್ತಿದ್ದರು. ವರ್ಷದ ಕೊನೆಯಲ್ಲಿ ವಿಜ್ಞಾನದ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಬಹುಮಾನವನ್ನೂ ಕೊಡುತ್ತಿದ್ದರು. ಅವರ ಸಹೃದಯತೆಯನ್ನು ಎಂದಿಗೂ ಮರೆಯಲಾರೆ.

No comments:

Post a Comment