Wednesday, 12 August 2009

ಬೆಂಗಳೂರಿಗೆ ಬಂದ ಹಳ್ಳಿಮುಖ

ಬೆಂಗಳೂರು ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಕೃಷಿಯಲ್ಲಿ ಹಣ ಮತ್ತು ನೆಮ್ಮದಿಯನ್ನು ಕಾಣದ ರೈತರು ತಮ್ಮ ಮಕ್ಕಳನ್ನು ಸಿಟಿಗೆ ಹೋಗಿರೆಂದು ಖುದ್ದು ಒತ್ತಾಯಿಸುತ್ತಿದ್ದಾರೆ. ಇಲ್ಲಿ ನಾವು ಪಟ್ಟ ಕಷ್ಟವೇ ಸಾಕು. ನೀವಾದರೂ ಉದ್ಧಾರವಾಗಿ ಎನ್ನುವುದು ಹೆತ್ತವರ ಬಯಕೆ. ಇಂತಹ ಮನೋಭಾವ ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳ ಸುತ್ತುಮುತ್ತಲಿನ ಹಳ್ಳಿಗಳಲ್ಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಎ, ಬಿಕಾಂ ನಂತರ ಬೆಂಗಳೂರಿನ ಬಸ್ಸು ಹತ್ತಿ ಹೋಗುವ ಹುಡುಗರಿಗೆ ಕೆಲಸವೇನೋ ಸುಲಭವಾಗಿ ಸಿಗುತ್ತದೆ. ಹಾಗಾದರೆ ಅಲ್ಲಿಯಾದರೂ ನೆಲೆ ಕಂಡುಕೊಳ್ಳುತ್ತಾರಾ ?
ನೋಡಿ, ಬೆಂಗಳೂರಿನ ಸುತ್ತಮುತ್ತ ಗ್ರಾಮಗಳಿಂದ ರಾಜಧಾನಿಗೆ ಬಂದಿಳಿಯುವ ಬಹುತೇಕ ಯುವಕರು ಗಾರ್ಮೆಂಟ್ಸ್, ಸೆಕ್ಯುರಿಟಿ, ಕಾರು, ಜೆಸಿಬಿ ಡ್ರೈವರ್‌, ಲಾರಿ ಕ್ಲೀನರ‍್, ಹೆಲ್ಪರ‍್ ಮುಂತಾದ ಅರೆ ಕೌಶಲ್ಯಾಧಾರಿತ ಕಸುಬುಗಳನ್ನು ನೆಚ್ಚಿಕೊಳ್ಳುತ್ತಾರೆ. ಆರಂಭದಲ್ಲಿ ಎರಡರಿಂದ ಮೂರು ಸಾವಿರ ರೂ. ಸಂಬಳ ಸಿಗುತ್ತದೆ. ಸಂಬಳ ಐದು ಸಾವಿರ ಮುಟ್ಟಲು ಮತ್ತೆ ಐದಾರು ವರ್ಷ ಕಾಯಬೇಕು. ಒಂದು ಗ್ರಾಮದಲ್ಲಿ ಹುಡುಗನೊಬ್ಬ ನಗರದಲ್ಲಿ ಹೇಗೋ ಯಾವುದೋ ಕೆಲಸ ಗಿಟ್ಟಿಸಿದನೆಂದರೆ ಸಾಕು, ಮತ್ತೆ ಹುಟ್ಟೂರಿಗೆ ಹೋಗುವಾಗ ವೇಷ ಭೂಷಣ ಮತ್ತು ಚಹರೆಯಲ್ಲಿ ಬದಲಾವಣೆಯಾಗುತ್ತದೆ. ಆತನ ಪ್ಯಾಂಟ್, ಟೀ ಶರ್ಟು, ಶೂ, ಬೆಲ್ಟ್ ಮತ್ತು ಇತ್ತೀಚಿನ ಮೊಬೈಲ್ ರವಾನಿಸುವ ಸಂದೇಶವೇ ಬೇರೆ.
ಪರ್ವಾಗಿಲ್ಲ ಕಣಯ್ಯಾ, ಹೊಲದಲ್ಲಿ ಕೆಸರು ಮೆತ್ತಿಕೊಂಡಿದ್ದ ಹುಡುಗ ಈ ಪಾಟಿ ಬೋ ಬೆಳೆದು ಬಿಟ್ಟವನೆ ಅಂತ ಜನ ತಪ್ಪು ತಪ್ಪಾಗಿ ಭಾವಿಸುತ್ತಾರೆ. ಅವರಿಗೆ ಹಿಂದು ಮುಂದು ವಿಚಾರಿಸದೆ ಕೈಲಾದಷ್ಟು ವರದಕ್ಷಿಣೆ, ವರೋಪಚಾರ ಮಾಡಿ ಕನ್ಯಾಧಾರೆ ಮಾಡುವ ಮಾತಾ ಪಿತೃಗಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮೂರು ಸಾವಿರ ರೂ. ಸಂಬಳದ ಬದುಕು ಎಷ್ಟು ದುರ್ಭರ ಎಂಬುದು ಅನುಭವಿಸಿದವನಿಗೆ ಮಾತ್ರ ಗೊತ್ತಿರುತ್ತದೆ. ಊರಿಗೆ ಹೋದಾಗ ಬೇಕರಿಯಿಂದ ಒಂದಷ್ಟು ಸ್ವೀಟು ಖಾರ ಕೊಂಡೊಯ್ಯುವ ಹುಡುಗ (ಕೆಲವೊಮ್ಮೆ ಅದೂ ಇಲ್ಲ ) ನಗರದ ಬೇಗುದಿಯನ್ನು ವಿವರಿಸಲು ಹೋಗುವುದಿಲ್ಲ. ಯಾರಿಂದೆಲ್ಲ ಎಷ್ಟೆಷ್ಟು ಸಾಲ ಮಾಡಿದ್ದೇನೆ, ಯಾವುದೋ ಕೆಟ್ಟ ಘಳಿಗೆಯಲ್ಲಿ ಚಟ ಹತ್ತಿಕೊಂಡಿದೆ ಅಂತ ಹೇಳಲ್ಲ. ಬಾಸ್‌ ಕೈಯಲ್ಲಿ ದಿನಕ್ಕೆಷ್ಟು ಸಲ ಉಗಿಸಿಕೊಳ್ಳುತ್ತಿದ್ದೇನೆ ಎನ್ನುವುದಿಲ್ಲ. ಗುತ್ತಿಗೆ ಕೆಲಸಕ್ಕೆ ಸೇರುವಾಗ ಖಾಲಿ ಪೇಪರಿಗೆ ಸಹಿ ಹಾಕಿಸಿದ್ದಾರೆ. ಯಾವಾಗ ಬೇಕಾದರೂ ನಿರುದ್ಯೋಗಿಯಾಗಬಹದು ಎಂದು ತಿಳಿಸುವುದಿಲ್ಲ. ಹೀಗಿದ್ದರೂ ಹಳ್ಳಿಗಾಡಿನ ಯುವಕರು ತಂಡೋಪತಂಡವಾಗಿ ಸಿಕ್ಕ ಕೆಲಸಕ್ಕೆ ಮೊದಲು ತವಕಿಸುತ್ತಾರೆ.
" ನಮಗೆ ಎರಡೆಕೆರೆ ಹೊಲ ಐತೆ. ರಾಗಿ ಬಿತ್ತಿದ್ದೇವೆ.ಮಳೆ ಇಲ್ಲದೆ ಬೆಳೆ ಒಣಗಿದೆ. ಬೋರ‍್ವೆಲ್ ನಲ್ಲಿ ನೀರಿಲ್ಲ. ಉಪ್ಪು ಹಾಕಿದ್ದಕ್ಕೆ (ರಾಸಾಯನಿಕ ಗೊಬ್ಬರಕ್ಕೆ ಕೆಲವು ಹಳ್ಳಿಗಳಲ್ಲಿ ಉಪ್ಪು ಅಂತಾನೇ ಕರೆಯುತ್ತಾರೆ) ಬೆಳೆ ಬೆಂದಂತೆ ಆಗಿದೆ. ಹೀಗಾದರೆ ಮಾಡುವುದೇನು ? ಐಟಿಐ ಎರಡನೇ ವರ್ಷ ಓದುತ್ತಿದ್ದೇನೆ. ಮುಂದೆ ಫಿಟ್ಟರ‍್ ಆಗಬಹುದೂಂತ ಅಂದುಕೊಂಡಿದ್ದೇನೆ. ಬೆಂಗಳುರಿಗೆ ಹೋಗಬೇಕು ಅಂತ ನೋಡ್ತಿದ್ದೀನಿ. ಕೃಷಿ ಇಷ್ಟ ಇಲ್ಲ ಅಂತಲ್ಲ, ಆದರೆ ಏನಿದೆ ಇದರಲ್ಲಿ ? ಹಾಕಿದ್ದೆಲ್ಲ ಲಾಸೇ " ಎನ್ನುತ್ತಾನೆ ಚೆನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಸವ. ಅಲ್ಲಿನ ಗುಡ್ಡಗಾಡಿನಲ್ಲಿ, ಮರಗಳ ನೆರಳಿನಲ್ಲಿ ಅಡ್ಡಾಡುವ ಅಷ್ಟಿಷ್ಟು ಯುವಕರಲ್ಲಿ ನಗರದಲ್ಲಿ ಬದುಕಿನ ಕನಸು ಹೊತ್ತವರೇ ಬಹುತೇಕ ಮಂದಿ.
ಕೃಷಿಯನ್ನು ಹಣದ ದೃಷ್ಟಿಯಲ್ಲಿ ನೋಡಬಾರದು. ಅದು ಬದುಕು ಅಲ್ಲವಾ ? ಎಂದರೆ, ಹಾಗಾದರೆ ಕೃಷಿಗೆ ಬಂಡವಾಳ ಬೇಡವೇ ? ನೋಡಿ, ರಾಗಿ ಬೇಜ ತರೋಕೆ, ಅದಕ್ಕೆ ಗೊಬ್ಬರ ತರೋದಿಕ್ಕೆ ದುಡ್ಡು ಬೇಡ್ವೇ ? ಎನ್ನುತ್ತಾನೆ. ಗಂಜಲ, ಸಗಣಿ ಮತ್ತು ನೀರು ಬೆರೆಸಿ ತಯಾರಿಸುವ ಜೀವಾಮೃತದ ಬಗ್ಗೆ ಗೊತ್ತಾ ? ಎಂದರೆ ಇಲ್ಲವೆಂದು ತಲೆಯಲ್ಲಾಡಿಸುತ್ತಾನೆ ಬಸವ.
ಇಂಥ ಸಂದರ್ಭದಲ್ಲಿ, ಇಲ್ಲಿ ಮೈಮುರಿಯುವುದಕ್ಕಿಂತ ಬೆಂಗಳೂರಿನಲ್ಲಿ ಹೇಗೋ ಒಂದು ಕೆಲಸಕ್ಕೆ ಸೇರಿಕೊಂಡರೆ ಸಾಕು, ತಿಂಗಳಿಗೆ ತಪ್ಪದೆ ಸಂಬಳ ಸಿಗುತ್ತದೆ, ಬಂದಷ್ಟು ಸಾಕು. ಮದುವೆ ಆಗಿ ಸುಖವಾಗಿ ಇರುತ್ತೇನೆ ಎನ್ನುತ್ತಾರೆ ಅವನಂತಹ ಹುಡುಗರು. ದುರದೃಷ್ಟವಶಾತ್ ಈವತ್ತು ನಗರಗಳಲ್ಲಿ ಅರೆ ಕೌಶಲ್ಯಾಧಾರಿತ ಕೆಲಸಗಳಿಗೆ ಸೇರಿಕೊಳ್ಳುವ ಹಳ್ಳಿಯ ಹುಡುಗರ ಅತಂತ್ರ ಪರಿಸ್ಥಿತಿಗೆ ಕೊನೆ ಇಲ್ಲವಾಗಿದೆ.
ಸೆಕ್ಯುರಿಟಿ ಕೆಲಸಕ್ಕೆ ಬೇಕಾಗಿದ್ದಾರೆ, ಸಂಬಳ ಮೂರರಿಂದ ಐದೂವರೆ ಸಾವಿರ. ಊಟ ಮತ್ತು ವಸತಿ ಸೌಕರ್ಯ ಇದೆ ಅಂತ ನಿತ್ಯ ಜಾಹೀರಾತುಗಳನ್ನು ಓದಬಹುದು. ಇದನ್ನು ನೋಡಿದವನು ಪರ್ವಾಗಿಲ್ಲ, ಸಂಬಳದ ಜೊತೆಗೆ ಊಟ ಮತ್ತು ವಸತಿ ಸೌಕರ್ಯವೂ ಇದೆ, ಇನ್ನೇನು ಬೇಕು ನಂಗೆ ಅಂತ ಹಿಗ್ಗಿನಿಂದ ಅರ್ಜಿ ಸಲ್ಲಿಸಲು ಹೊರಡುತ್ತಾನೆ. ಆತ ಗೊತ್ತಿಲ್ಲದೆ ಬಲಿಪೀಠಕ್ಕೆ ಕೊರಳೊಡ್ಡುವುದು ಹೀಗೆ. ಕಾರ್ಪೊರೇಟ್‌ ಕಂಪನಿಗಳಲ್ಲಿ ಭದ್ರತೆಗೆ ಸಿಬ್ಬಂದಿ ಬೇಕು. ಅವುಗಳು ಸಾಮಾನ್ಯವಾಗಿ ನಾನಾ ಏಜೆನ್ಸಿಗಳನ್ನು ಅವಲಂಬಿಸುತ್ತವೆ. ನೇರವಾಗಿ ನೇಮಕ ಮಡಿಕೊಳ್ಳುವುದು ಕಡಿಮೆ. ಅನೇಕ ಏಜೆನ್ಸಿಗಳು ಕಾರ್ಪೊರೇಟ್‌ ಕಂಪನಿಗಳು ಕೊಡುವ ಸಂಬಳದಲ್ಲಿ ಶೇ. ೨೫ನ್ನು ತಾವೇ ನುಂಗಿಕೊಳ್ಳುವುದು ಸಾಮಾನ್ಯ.ಇನ್ನು ಊಟ ಬೇಕಾದರೆ ಕಂಪನಿಗಳ ಕ್ಯಾಂಟೀನ್‌ ತೋರಿಸುತ್ತವೆ. ಅಷ್ಟೇ. ಅಷ್ಟಿಷ್ಟು ಕೊಟ್ಟರೆ ಅದೇ ಹೆಚ್ಚು. ಇನ್ನು ವಸತಿ ವಿಚಾರ ಶತ್ರುಗಳಿಗೂ ಬೇಡ. ಒಬ್ಬರು ಅಥವಾ ಇಬ್ಬರು ಕಷ್ಟದಲ್ಲಿ ಇರಬಹುದಾದ ಗಬ್ಬೇಳುವ ಕೊಠಡಿಯಲ್ಲಿ ಇಪ್ಪತ್ತೈದು ಜನರನ್ನು ದನಗಳಂತೆ ದಬ್ಬುತ್ತಾರೆ. ಅದುವೇ ವಸತಿ ಸೌಕರ್ಯ. ಅಲ್ಲಿ ನೀರಿಲ್ಲ, ಬೆಳಕಿಲ್ಲ, ಕೂರಲು ಜಾಗವಿಲ್ಲ, ನಿಲ್ಲಲು ಆಗಲ್ಲ ಪರಿಸ್ಥಿತಿ. ಅರಳಾಳು ಸಂದ್ರದಿಂದ ಇಪ್ಪತ್ತೈದು ಮಂದಿ ಹುಡುಗರು ಇತ್ತೀಚೆಗೆ ನಗರದಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದರು. ಯಾವುದೋ ಕುಳಕ್ಕೆ ಸೇರಿದ ಖಾಲಿ ಸೈಟುಗಳನ್ನು ಹಗಲು ರಾತ್ರಿ ಯಾರೂ ಲಪಟಾಯಿಸದಂತೆ ಕಾಯುವುದೇ ಅವರ ಕೆಲಸವಾಗಿತ್ತು. ಏಜೆನ್ಸಿಯ ದಬ್ಬಾಳಿಕೆ ಸಹಿಸಲಾಗದೆ ವಾರದಲ್ಲಿಯೇ ಕಾಲ್ತೆಗೆದು ಮನೆಗೆ ವಾಪಸಾಗಿದ್ದರು. ಮತ್ತೊಬ್ಬ ಬೆಂಗಳೂರಿನಲ್ಲಿ ಮೊಬೈಲ್ ರಿಪೇರಿಯ ಜತೆಗೆ ಬೈಕ್ ಕದಿಯುವುದನ್ನೂ ಕಲಿತು ಬಿಟ್ಟಿದ್ದ. ಹಾಗೆ ಕದ್ದ ಬೈಕ್‌ ಗಳನ್ನು ಮಾರಾಟ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಊರಿನ ಹುಡುಗ ಅಂತ ಬೈಕ್‌ ಖರೀದಿಸಿದ್ದ ಗ್ರಾಮಸ್ಥರು ಹಣ ಮತ್ತು ಬೈಕನ್ನು ಜೊತೆಗೆ ಕಳೆದುಕೊಂಡಿದ್ದರು. ಹೀಗೆ ದಾರಿ ತಪ್ಪುವ ಹುಡುಗರನ್ನು ತಿದ್ದುವವರಾರು ?
ಇಂಥ ಕಥೆಗಳನ್ನು ಹಳ್ಳಿಗಾಡಿನಲ್ಲಿ ಹಿರಿಯರಿಂದ ಕೇಳಬೇಕಾದಾಗ ನೋವಾಗುತ್ತದೆ.

No comments:

Post a Comment