ಅಂತಹದೊಂದು ಆತಂಕ ಕಾಡುತ್ತಿದೆ. ಎಲ್ಲಿ ಹೋದರೂ ಜ್ವರಪೀಡಿತ ಮಂದಿ ಸಿಗುತ್ತಾರೆ. ವಯೋಮಿತಿಯ ಭೇದವಿಲ್ಲದೆ ರೋಗಿಗಳಿಂದ ಆಸ್ಪತ್ರೆಗಳು ತುಳುಕುತ್ತಿವೆ. ಎಷ್ಟೋ ಮಂದಿ ಮನೆಯೊಳಗೆ ಸ್ವಚ್ಛತೆಯನ್ನು ಜಾರಿಯಲ್ಲಿರಿಸುತ್ತಾರೆ. ಸೊಳ್ಳೆ ಓಡಿಸಲು ಕಾಯಿಲ್ ಗಳು, ಧೂಪ, ಅಗರಬತ್ತಿ, ಸೊಳ್ಳೆ ಪರದೆ, ಲಿಕ್ವಿಡ್ ಸಾಧನಗಳು ಮುಂತಾದ ಕ್ರಮ ಕೈಗೊಳ್ಳುತ್ತಾರೆ. ಆದರೆ ಮನೆಯ ಗೇಟು ದಾಟಿದ ನಂತರ ಆ ಪ್ರಜ್ಞೆ ಇರುವುದಿಲ್ಲ. ಯಾವಾಗ ಸಿಕ್ಕಸಿಕ್ಕಲ್ಲಿ ಉಗುಳುವವರಿಗೆ ಬುದ್ಧಿ ಬರುತ್ತದೆಯೋ ಎನ್ನಿಸುತ್ತದೆ.
ಕಸದ ತೊಟ್ಟಿಗೆ ಹೋಗಿ ಕಸ ಬಿಸಾಡುವುದಿಲ್ಲ. ನಗರಪಾಲಿಕೆಯೂ ಸರಿಯಾಗಿ ಕಸದ ವಿಲೇವಾರಿ ಮಾಡುವುದಿಲ್ಲ. ಒಟ್ಟಾರೆ ಇಡೀ ಬೆಂಗಳೂರು ಕಸದ ತೊಟ್ಟಿಯಾಗಿದೆ. ಇದರ ಪರಿಣಾಮ ? ಮನೆಮನೆಯಲ್ಲೂ ಚಿಕೂನ್ ಗೂನ್ಯಾ,ಡೆಂಗ್ಯು, ಮಲೇರಿಯಾ ಕಾಡುತ್ತಿದೆ. ಇತ್ತೀಚೆಗೆ ಎಲ್ಲದಕ್ಕೂ ಕಲಶವಿಟ್ಟಂತೆ ಹಂದಿ ಜ್ವರ ಬಂದಿದೆ. ನಗರದ ಪರಿಸರ ಮಾಲಿನ್ಯ, ಜನದಟ್ಟಣೆಯ ಪರಿಣಾಮ ಈ ಎಲ್ಲ ರೋಗಗಳು ತೀವ್ರವಾಗಿ ಹರಡುತ್ತಿವೆ. ಈವತ್ತು ಸ್ವಲ್ಪ ಜ್ವರ ಬಂದರೆ ಸಾಕು, ವೈದ್ಯರು ತಕ್ಷಣ ಆರೆಂಟು ಬಗೆಯ ತಪಾಸಣೆ ಮಾಡಿಸಿ ಎಂದು ಚೀಟಿ ಬರೆದುಕೊಡುತ್ತಾರೆ. ಕನಿಷ್ಠ ೭೫೦-೧೦೦೦ ರೂ. ತನಕ ತಪಾಸಣೆಯ ಶುಲ್ಕ ಆಗುತ್ತದೆ. ವೈದ್ಯರ ಶುಲ್ಕ , ಔಷಧಗಳ ವೆಚ್ಚ ಮತ್ತೂ ಅಷ್ಟೇ ಆಗುತ್ತದೆ. ಅಕಸ್ಮಾತ್ ಚಿಕೂನ್ ಗೂನ್ಯಾ, ಡೆಂಗ್ಯು, ಮಲೇರಿಯಾ ಬಂದರಂತೂ ಆಸ್ಪತ್ರೆಗೆ ಅಡ್ಮಿಟ್ ಆಗಲು ಸೂಚಿಸುತ್ತಾರೆ. ರೋಗಿಗೂ ಅವರ ಮನೆಯ ಮಂದಿಗೂ ಸಂಕಟ ಮತ್ತೆ ಖರ್ಚು, ನೋವು, ತಳಮಳ. ಬೆಂಗಳೂರಿನಲ್ಲಿ ಒಂದು ದಿನ ಸಂಪಾದನೆ ಇಲ್ಲದಿದ್ದರೆ ತಡೆದುಕೊಳ್ಳುವುದು ಕಷ್ಟ. ಬೇಕೆಂದಾಗ ರಜೆ ಸಿಗುವುದಿಲ್ಲ. ಕೆಲಸ ಹೋಗುವ ಭೀತಿ, ಸಾಲದ ಕಂತು ಕಟ್ಟುವ ಯೋಚನೆ ಇರುತ್ತದೆ. ಒಟ್ಟಾರೆ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಒಂದು ಕಡೆ ಆರೋಗ್ಯಹಾನಿ, ಮತ್ತೊಂದೆಡೆ ವಿತ್ತ ಹಾನಿ. ದೇವರೇ ಕಾಪಾಡಬೇಕು ಬೆಂಗಳೂರನ್ನು..
No comments:
Post a Comment