ಮೊನ್ನೆ ಸೂಲಿಕೆರೆ ಗ್ರಾಮಕ್ಕೆ ಹೋಗಿದ್ದೆ. ಕೆಂಗೇರಿ ಹೋಬಳಿಯ ಪುಟ್ಟ ಗ್ರಾಮವಿದು. ಸೂಲಿ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರ ಜನ ವಾಸಿಸುತ್ತಿದ್ದಾರೆ. ಹಚ್ಚ ಹಸಿರಿನ ತೋಟಗಳು , ಆಲ, ಮಾವು ತೆಂಗಿನ ಮರಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಆದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಸಲುವಾಗಿ ಈ ಗ್ರಾಮ ಪಂಚಾಯಿತಿ ಮುಂದಿನ ದಿನಗಳಲ್ಲಿ ನಾಮಾವಶೇಷವಾಗಲಿದೆ.ಇಂಥ ಗ್ರಾಮಪಂಚಾಯಿತಿ ಕಚೇರಿಯ ತುಂಬ ಬಡತನದ ರೇಖೆಗಿಂತ ಕೆಳಗಿರುವವರ ಹೆಸರುಗಳನ್ನು ಬರೆಯಲಾಗಿದೆ.
ನಾನು ಕೆಲವು ದೇವಸ್ಥಾನಗಳಿಗೆ, ಧಾರ್ಮಿಕ ಮಂದಿರಗಳಿಗೆ, ಶಾಲೆಗಳಿಗೆ ಹೋಗಿದ್ದಾಗ, ದಾನಿಗಳ ಹೆಸರನ್ನು ಅಮೃತ ಶಿಲೆಯಲ್ಲಿಯೋ, ಗೋಡೆಯಲ್ಲಿಯೋ ಬಣ್ಣ ಬಣ್ಣದ ಪೇಂಟಿನಲ್ಲಿ ಬರೆದದ್ದನ್ನು ಕಂಡಿದ್ದೆ. ಆದರೆ ಬಡತನದ ರೇಖೆಗಿಂತ ಕೆಳಗಿನವರ ಹೆಸರುಗಳನ್ನು ಹೀಗೆ ಗೋಡೆಯಲ್ಲಿ ಬರೆದು ಶಾಶ್ವತಗೊಳಿಸಿದ್ದನ್ನು ಇದೇ ಮೊದಲ ಬಾರಿಗೆ ಕಂಡು ಸೋಜಿಗ ಪಟ್ಟೆ. ಹಾಗಾದರೆ ಅವರೆಲ್ಲ ಇನ್ನು ಶ್ರೀಮಂತರಾಗಲು ಸಾಧ್ಯವೇ ಇಲ್ಲವಾ ? ಎಂಥ ಕ್ರೂರ ಅಣಕವಲ್ಲವೇ ಇದು ? ಇವರೆಲ್ಲ ಬಡವರು ಅಂತ ಗ್ರಾಮ ಪಂಚಾಯಿತಿ ಗೋಡೆಯ ತುಂಬ ಬರೆದುಬಿಡುವುದು ಪ್ರಜಾಪ್ರಭುತ್ವಕ್ಕೆ ಶೋಭೆಯೇ ? ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆಯವರೇ ಉತ್ತರಿಸಬೇಕು...

No comments:
Post a Comment