
ಈವತ್ತು ಕ್ರೆಡಿಟ್ ಕಾರ್ಡ ಬಳಕೆದಾರರ ಸಂಘದ ಕಾರ್ಯದರ್ಶಿ ಗಿಡ್ಡಪ್ಪನವರೂ ಇದೇ ಮಾತನ್ನು ಹೇಳಿದರು. ಅವರು ಈ ಹಿಂದೆ ಬ್ಯಾಂಕ್ ಅಧಿಕಾರಿಯಾಗಿದ್ದವರು. ಅಗಾಧವಾದ ಜೀವನಾನುಭವ ಅವರಲ್ಲಿದೆ. ಒಂದೂರಿನಲ್ಲಿದ್ದಾಗ ಊರಿನ ಸೊಸೈಟಿಗಳಿಗೆ ತಲಾ ಹತ್ತು ಹಸುಗಳನ್ನು ಕೊಳ್ಳಲು ಸಾಲದ ನೆರವು ನೀಡಿದರು. ಅವರು ಮಾಡಿದ್ದಿಷ್ಟೇ, ಸೊಸೈಟಿಗಳು ಬ್ಯಾಂಕ್ ನಲ್ಲಿ ಇಟ್ಟಿದ್ದ ಠೇವಣಿಯನ್ನೇ ಸಾಲವಾಗಿ ವಿತರಿಸಿದ್ದರು. ಹಸು ಕೊಂಡ ಜನ ಶ್ರದ್ಧೆಯಿಂದ ಸಾಕಿದರು. ಹೈನುಗಾರಿಕೆಯಲ್ಲಿ ಜೀವನೋಪಾಯ ಕಂಡುಕೊಂಡರು. ಸಾಲವನ್ನು ಚುಕ್ತಾ ಮಾಡಿದರು.
ಮತ್ತೊಂದು ಸಲ ಯಾವುದೋ ಊರಿನಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲು, ರಟ್ಟು, ಕಡತಗಳು, ಫೈಲ್ ಕವರ‍್ ಗಳನ್ನು ತಯಾರಿಸುವ ಸಣ್ಣ ಘಟಕ ಸ್ಥಾಪಿಸಲಾಯಿತು. ಗಿಡ್ಡಪ್ಪನವರು ಸಾಲ ಕೊಡಿಸಿದರು. ಮಹಿಳೆಯರಯ ಉತ್ಸಾಹದಿಂದ ಫೈಲುಗಳನ್ನು ತಯಾರಿಸಿದರು. ಆದರೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟವಾಯಿತು.
ಮತ್ತೊಮ್ಮೆ ಆದಿವಾಸಿ ಜನರಿಗೆ ಸಾಲ ಕೊಡಲು ಗಿಡ್ಡಪ್ಪ ಮನಸ್ಸು ಮಾಡಿದರು. ಆದರೆ ನಮಗೇಕೆ ಸಾಲ ಎಂದು ಹೇಳಿದರಂತೆ. ಮಾತಿನ ನಡುವೆ ಅವರೊಂದು ಕಥೆ ಹೇಳಿದರು.
ಒಮ್ಮೆ ಬ್ಯಾಂಕ್ ನವರು ಕುಗ್ರಾಮವೊಂದಕ್ಕೆ ತೆರಳಿದರು. ಊರಿನ ಕಟ್ಟೆಯಲ್ಲಿ ಯುವಕರು ಕೂತು ಹರಟುತ್ತ, ಜೂಜಾಡುತ್ತ ಮಜಾ ಉಡಾಯಿಸುತ್ತಿದ್ದರು. ಅವರ ಹತ್ತಿರಕ್ಕೆ ಬಂದ ಅಧಿಕಾರಿಗಳು, ನೀವೇಕೆ ಬೇರೆ ಕೆಲಸವಿಲ್ಲದೆ ಕೂತಿದ್ದೀರಾ ? ಏನಾದರೂ ಉದ್ಯೋಗ ಮಾಡಿ. ಬೇಕಾದರೆ ಸಾಲ ಕೊಡುತ್ತೇವೆ. ಹಸುಗಳನ್ನು ಸಾಕಿ. ಕುರಿ ಸಾಕಿ ಎಂದರು.
ಅದಕ್ಕೆ ಆ ಯುವಕರು, ಮತ್ತೆ ಏನಾಗುತ್ತದೆ ? ಎಂದರು. ಅಧಿಕಾರಿಗಳು, ಕುರಿ, ಹಸುಗಳನ್ನು ಸಾಕಿ ಹಾಲು, ಹಣ ಗಳಿಸಬಹುದು. ಇದರಿಂದ ನಿಮ್ಮ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ. ಮುಂದೆ ಒಳ್ಳೆಯದಾಗುತ್ತದೆ. ಎಂದರು.
ಮುಂದೆ ಏನಾಗುತ್ತದೆ ಎಂದರು ಯುವಕರು. ಅಧಿಕಾರಿಗಳು, ನಿಮಗೆ ಮದುವೆಯಾಗಿ ಮಕ್ಕಳಾಗುತ್ತವೆ. ಸಂಸಾರ ಸರಾಗವಾಗಿ ನಡೆಯುತ್ತದೆ ಎಂದು ಬಣ್ಣಿಸಿದರು.
ಪಟ್ಟು ಬಿಡದ ಯುವಕರು, ಮುಂದೇನಾಗುತ್ತದೆ ಎಂದರು. ಅದಕ್ಕೆ ಅಧಿಕಾರಿಗಳು, ವಯಸ್ಸಾದ ಮೇಲೆ ಆನಂದವಾಗಿ, ಯಾವ ಚಿಂತೆಯೂ ಇಲ್ಲದೆ ಕಾಲ ಕಳೆಯಬಹುದು ಎಂದರು.
ಅದಕ್ಕೆ ಆ ಯುವಕರು, ನಾವೀಗ ಅದನ್ನೇ ಮಾಡುತ್ತಿದ್ದೇವೆ. ಆನಂದವಾಗಿ ಕಾಲ ಕಳೆಯಲು ವಯಸ್ಸಾಗುವ ತನಕ ಕಾಯಬೇಕೇ ? ಎಂದರಂತೆ.
No comments:
Post a Comment