
ರಾಜೇಶ್ವರಿ ಟೀಚರ‍್ ಆವತ್ತು ಮಧ್ಯಾಹ್ನ ಊಟವಾದ ನಂತರ ಧ್ರುವ ಕುಮಾರನ ಪಠ್ಯವನ್ನು ಭೋದಿಸುತ್ತಿದ್ದರು. ಎಲ್ಲ ಮಕ್ಕಳು ಮಂತ್ರಮುಗ್ಧರಾಗಿ ಕತೆ ಕೇಳುತ್ತಿದ್ದರು. ಟೀಚರ‍್ ಸುಮ್ಮನೆ ಪಾಠ ಹೇಳುತ್ತಿರಲಿಲ್ಲ. ಗುರು ಶಿಷ್ಯರ ಪಾತ್ರಾಭಿನಯ ಕೂಡ ಇತ್ತು. ಧ್ರವ ಕುಮಾರ ತಂದೆಯ ತೊಡೆಯನ್ನೇರಿ ಕುಳಿತುಕೊಳ್ಳುವ ಆಸೆಯಿಂದ ಬಂದಾಗ, ಆತನ ಮಲತಾಯಿ ಬಾಲಕನನ್ನು ತಡೆದು ದೂಡುವ ಮನೋಜ್ಞ ದೃಶ್ಯವಿದೆ. ಉತ್ತಮನಾಗಿದ್ದ ಉದನೇಶ್ವರನನ್ನು ರಾಜೇಶ್ವರಿ ಟೀಚರ‍್ ಹತ್ತಿರ ಕೂರಿಸಿದ್ದರು. ನನ್ನನ್ನೇಕೆ ಟೀಚರ‍್ ಕರೆಯುತ್ತಿಲ್ಲವಲ್ಲ ಎಂದು ಬಲವಾಗಿ ಅನ್ನಿಸುತ್ತಿತ್ತು. ಕೆಲವು ಮಕ್ಕಳು ಧ್ರುವ ಕುಮಾರನ ಕಥೆ ಕೇಳಿ ಕಣ್ಣೀರು ಹಾಕುತ್ತಿದ್ದರು. ಅಂಥ ಭಾವಸ್ಪರ್ಶಿ ಕಥನವದು. ಅಷ್ಟರಲ್ಲಿ ಧ್ರವ ಕುಮಾರನನ್ನು ದೂಡುವ ಕ್ಷಣ ಬಂತು. ರಾಜೇಶ್ವರಿ ಟೀಚರ‍್ ನನ್ನನ್ನು ಕರೆದರು. ಖುಷಿಯಾಯಿತು.
ಧ್ರುವಕುಮಾರನನ್ನು ಹೀಗೆ ದೂಡಿದರು..ಅನ್ನುತ್ತಾ ನನ್ನನ್ನೇ ದೂಡಿದ ಹಾಗೆ ಮಾಡಿದರು. ಅವರಿಂದ ದೂಡಿಸಿಕೊಂಡಾದರೂ, ಪಾತ್ರಾಭಿನಯದಲ್ಲಿ ಪಾಲ್ಗೊಂಡ ತೃಪ್ತಿ ಇತ್ತು. ಮತ್ತೆ ಯಥಾ ಸ್ಥಾನದಲ್ಲಿ ಕುಳಿತುಕೊಂಡೆ.
ಪ್ರತಿ ದಿನ ಹಿಂದಿನ ದಿನ ಮಾಡಿದ್ದ ಪಠ್ಯದ ಮೇಲೆ ಕೆಲವು ಪ್ರಶ್ನೆಗಳನ್ನು ಟೀಚರ‍್ ಕೇಳುತ್ತಿದ್ದರು. ನನಗೆ ಅದರಲ್ಲಿ ಮಿಕ್ಕಿದ್ದಕ್ಕೆ ಹೋಲಿಸಿದರೆ ಹೆಚ್ಚು ಅಂಕ ಸಿಗುತ್ತಿತ್ತು. ಕ್ರಮೇಣ ಕನ್ನಡ ಪಾಠ ಎಂದರೆ ಬಲು ಇಷ್ಟವಾಯಿತು. ಏಳನೇ ತರಗತಿಯಲ್ಲಿ ಪಂಡಿತ ಮಾಸ್ತರರು ಕನ್ನಡ ಪಾಠಕ್ಕೆ ನಮಗೆ ಸಿಕ್ಕಿದ ನಂತರವಂತೂ ಕನ್ನಡ ಪರಮಪ್ರಿಯವಾಯಿತು. ಲೆಕ್ಕ ಮತ್ತು ಇಂಗ್ಲಿಷ್ ಮಾತ್ರ ಎಲ್ಲ ತರಗತಿಗಳಲ್ಲಿಯೂ ಬಹಳ ಕಷ್ಟವಾಗುತ್ತಿತ್ತು.
No comments:
Post a Comment