ಕೆಂಗೇರಿ ಉಪನಗರದ ಆಸ್ಪತ್ರೆಯೊಂದಕ್ಕೆ ಕಳೆದ ಎರಡು ದಿನಗಳಿಂದ ಹೋಗಿದ್ದೆ.
ನನ್ನವಳ ಆರೋಗ್ಯ ಹದಗೆಟ್ಟಿತ್ತು. ಜ್ವರದಿಂದ ಬಳಲುತ್ತಿದ್ದ ಅವಳಿಗೆ ಐದಾರು ಬಗೆಯ ಟೆಸ್ಟ್ ಗಳನ್ನು ಮಾಡಬೇಕು ಎಂದು ವೈದ್ಯ ಮಹೇಶ್ (ಹೆಸರು ಬದಲಿಸಿದೆ) ಶಿಫಾರಸು ಮಾಡಿದರು. ಇದಕ್ಕೂ ಮುನ್ನ ಚಂದ್ರಶೇಖರ‍್ ಎಂಬ ವೈದ್ಯರು ಪರೀಕ್ಷಿಸಿ , ಹಲವಾರು ಮಾತ್ರೆಗಳನ್ನು ಬರೆದುಕೊಟ್ಟರು. ಇತ್ತ ಶೇಖರ‍್ (ಹೆಸರು ಬದಲಿಸಿದೆ) ಕೂಡ ಹಲವಾರು ಮಾತ್ರೆಗಳನ್ನು ಬರೆದುಕೊಟ್ಟರು. ಎಲ್ಲವನ್ನೂ ತಂದಿದ್ದಾಯಿತು.
ನಾನಾ ಬಗೆಯ ಜ್ವರಗಳು ಬೆಂಗಳೂರನ್ನು ಈವತ್ತು ಕಾಡುತ್ತಿವೆ. ಹೀಗಾಗಿ ತಡ ಮಾಡಲಿಲ್ಲ. ೭೫೦ ರೂ.ನಲ್ಲಿ ಮೆಡಿಕಲ್ ಟೆಸ್ಟ್ ರಿಪೋರ್ಟ್ ಈವತ್ತು ಮಧ್ಯಾಹ್ನ ಸಿಕ್ಕಿತು. ಚಿಕೂನ್ ಗೂನ್ಯಾ, ಡೆಂಗೆ, ಮಲೇರಿಯಾ, ಟಾಯ್ ಫಾಯ್ಡ್ ಮುಂತಾದ ಯಾವುದೇ ರೋಗದ ವೈರಸ್ ದಾಳಿ ಆಗಿರಲಿಲ್ಲ.
ರಿಪೋರ್ಟ್ ನೋಡಿದ ವೈದ್ಯ ಮಹೇಶ್, ಇನ್ನೆರಡು ದಿನ ಬಿಟ್ಟು ರೋಗಿಯನ್ನು ಕರೆದುಕೊಂಡು ಬನ್ನಿ. ಕೆಲವೊಂದು ಇನೀಶಿಯಲ್ ಹಂತದಲ್ಲಿ ನೆಗೆಟಿವ್ ಎಂದೇ ಬರುತ್ತದೆ. ನಂತರ ಪಾಸಿಟಿವ್ ಬರಬಹುದಾದ ಸಾಧ್ಯತೆಯೂ ಇದೆ ಎಂದರು. ಹಾಗಾದರೆ ಎರಡು ದಿನಗಳ ನಂತರ ಟೆಸ್ಟ್ ಗೆ ಮತ್ತೆ ೭೫೦ ರೂ. ಕೇಳುವುದಿಲ್ಲವೇ ? ಅವರು ಹೌದಾದರೆ ಕೇಳುತ್ತಾರೆ.
ನನ್ನ ಪ್ರಶ್ನೆ ಇಷ್ಟೇ. ಹಾಗಾದರೆ ತಕ್ಷಣ ಟೆಸ್ಟ್ ಮಾಡಿಸಿದ್ದೇಕೆ ? ಎರಡು ದಿನ ಬಿಟ್ಟೇ ಮಾಡಿಸಬಹುದಿತ್ತಲ್ಲವೇ ? ಈಗಾಗಲೇ ಸಾವಿರಾರು ರೂ. ಖರ್ಚಾಗಿದೆ. ಮತ್ತೊಂದು ಕಡೆ ನನ್ನಾಕೆ ಗುಣಮುಖಳಾಗಿಲ್ಲ. ಪ್ರತಿ ಸಲ ಭೇಟಿಯಾದಾಗಲೂ ಸಮಾ ಆಂಟಿ ಬಯಾಟಿಕ್ಸ್ ಗುಳಿಗೆಗಳನ್ನು ಕೊಡುತ್ತಾರೆ. ಹೀಗೆ ಆಸ್ಪತ್ರೆಗಳು ಮತ್ತು ಅಲ್ಲಿರುವ ವೈದ್ಯರು ಸುಲಿಗೆಗೆ ನಿಲ್ಲಬಹುದೇ ?
ಸಮ್ಮನಸ್ಸಿಗೆ ಶರಣು
6 months ago
No comments:
Post a Comment