Sunday 19 January 2014

(ಹೈಸ್ಕೂಲಿನಲ್ಲಿದ್ದಾಗ ಫೇಲಾದ ಹುಡುಗನೊಬ್ಬ ಐನೂರು ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಮ್ಯಾಕ್ಸ್ ಮೊಬೈಲ್ ಕಂಪನಿ ಕಟ್ಟಿದ ಕಥೆಯಿದು. ಅಜಯ್ ಅಗರವಾಲ್ ಎಂಬ ಯುವ ಉದ್ಯಮಿಯ ಸಾಹಸಗಾಥೆ ನಿಮಗೂ ಇಷ್ಟವಾದೀತು ಎಂದನ್ನಿಸುತ್ತಿದೆ.) ಹದಿನೈದು ವರ್ಷವಾಗಿದ್ದಾಗ ಶಾಲೆಯಿಂದ ಹೊರಬಿದ್ದೆ. ತಂದೆ ಮುಂಬಯಿನಲ್ಲಿ ಎಲೆಕ್ಟ್ರೋನಿಕ್ ವ್ಯಾಪಾರ ಮಾಡುತ್ತಿದ್ದರು. ಕುಟುಂಬದ ವಹಿವಾಟಿನಲ್ಲಿ ಭಾಗವಹಿಸುವ ಬಯಕೆ ನನ್ನಲ್ಲಿತ್ತು. ಮನೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಲು ಒತ್ತಡವಿರಲಿಲ್ಲ. 1992ರಲ್ಲಿ ತಂದೆಗೆ ಅಕೌಂಟ್ಸ್‌ನಲ್ಲಿ ಸಹಾಯ ಮಾಡಲು ಆರಂಭಿಸಿದೆ. ಪ್ರತಿಯಾಗಿ ಅಪ್ಪ ತಿಂಗಳಿಗೆ 4000-5000 ರೂ. ಕೊಡುತ್ತಿದ್ದರು. ಐದು ವರ್ಷಗಳ ನಂತರ ಇತರ ಕ್ಷೇತ್ರಗಳಿಗೆ ವಿಸ್ತರಿಸತೊಡಗಿತು. ಗಾರ್ಮೆಟ್ಸ್, ಸಂಗೀತ ವಾದ್ಯ, ಮೊಬೈಲ್ ಫೋನ್ ಬಿಡಿಭಾಗಗಳ ವ್ಯಾಪಾರ ಮಾಡಿದೆವು. ಮಲೇಷ್ಯಾ ಮತ್ತು ಚೀನಾಕ್ಕೆ ಹೋಗಿ ನೋಡಿಕೊಂಡು ಬಂದೆವು. ಜನವರಿ 2002ರಲ್ಲಿ ಸ್ವಂತ ಕಂಪನಿ ಸ್ಥಾಪಿಸಿದೆ. ಉಳಿತಾಯದ ಹತ್ತು ಲಕ್ಷ ರೂ. ಬಂಡವಾಳದಲ್ಲಿ ಸಾಹಸಕ್ಕೆ ಕೈ ಹಾಕಿದ್ದೆ. ಮ್ಯಾಕ್ಸ್ ಮೊಬೈಲ್ಸ್ ಆಂಡ್ ಫೋನ್ ಅಸೆಸರೀಸ್ ಎಂಬ ಕಂಪನಿಯದು. ಮೊಬೈಲ್ ಫೋನ್ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆ. ಮುಂಬಯಿನಲ್ಲಿ ಡೀಲರ್‌ಗಳಿಗೆ ಇತರರಿಗಿಂತ ಅಗ್ಗದ ಬೆಲೆಗೆ ಮಾರುತ್ತಿದ್ದೆ. ಉತ್ಪಾದಕರು ಕೊಡದಿದ್ದರೂ, ಬ್ಯಾಟರಿಗಳಿಗೆ ವಾರಂಟಿ ಕೊಡುತ್ತಿದ್ದೆ. ಸ್ವಲ್ಪ ಹೊರೆಯಾದರೂ, ಬ್ರ್ಯಾಂಡ್ ಅಭಿವೃದ್ಧಿಯಾಯಿತು. ಮೊದಲ ವರ್ಷ 15 ಲಕ್ಷ ರೂ. ವಹಿವಾಟು ನಡೆಸಿದ್ದೆ. ಮೊಬೈಲ್ ಫೋನ್ ಬ್ಯಾಟರಿಗಳಿಗೆ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾದೆ. ಕಂಪನಿಯ ಲಾಭದಲ್ಲಿ ಸುಮಾರು 40 ಲಕ್ಷ ರೂ. ಉಳಿಸಬಹುದಿತ್ತು. ಕೊರಿಯಾದಿಂದ ಪ್ಲಾಸ್ಟಿಕ್ ಮೌಲ್ಡಿಂಗ್ ಮೆಶೀನ್ ಮತ್ತು ವೆಲ್ಡಿಂಗ್ ಮೆಶೀನ್ ತರಿಸಿದೆ. 2004ರ ಏಪ್ರಿಲ್ ವೇಳೆಗೆ ದಿನಕ್ಕೆ 5,000 ಬ್ಯಾಟರಿಗಳನ್ನು ಉತ್ಪಾದಿಸುತ್ತಿದ್ದೆವು. ಕಂಪನಿಯ ವಿಸ್ತರಣೆಗೆ ಯೋಜನೆಗಳನ್ನು ಕೈಗೊಳ್ಳಬೇಕಿತ್ತು. ಹರಿದ್ವಾರದಲ್ಲಿ 2006ರಲ್ಲಿ 20 ಲಕ್ಷ ರೂ.ಗೆ 6,000 ಚದರ ಅಡಿ ಭೂಮಿ ಖರೀದಿಸಿದೆ. ಬ್ಯಾಂಕ್ ಸಾಲ ಪಡೆದು 2.5 ಕೋಟಿ ರೂ.ಗೆ ಕಾರ್ಖಾನೆ ಸ್ಥಾಪಿಸಿದೆ. ಹರಿದ್ವಾರದ ಕಾರ್ಖಾನೆಯ ಪರಿಣಾಮ ಬ್ಯಾಟರಿಗಳ ಉತ್ಪಾದನೆ ದಿನಕ್ಕೆ 1 ಲಕ್ಷಕ್ಕೆ ಏರಿತು. 2006-07ರಲ್ಲಿ 2 ಕೋಟಿ ರೂ.ಗಳಷ್ಟಿದ್ದ ವಹಿವಾಟು ಮರುವರ್ಷ ಮೂರು ಕೋಟಿ ದಾಟಿತು. 2008 ನಿರ್ಣಾಯಕ ವರ್ಷವಾಗಿತ್ತು. ಮ್ಯಾಕ್ಸ್ ಮೊಬೈಲ್ ಬ್ರ್ಯಾಂಡ್ ಉದಯಿಸಿತು. 2008, 2009ರಲ್ಲಿ 33 ಮಾದರಿಯ ಫೋನ್‌ಗಳನ್ನು ಬಿಡುಗಡೆಗೊಳಿಸಿದೆವು. ಐಪಿಎಲ್ ಪಂದ್ಯಾವಳಿಯಲ್ಲಿ 12 ಕೋಟಿ ರೂ.ಗಳನ್ನು ಜಾಹೀರಾತಿಗೆ ವ್ಯಯಿಸಿದೆವು. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಸುಮಾರು 100 ಕೋಟಿ ರೂ. ಹಣಕಾಸು ಸಂಗ್ರಹಿಸಲಾಯಿತು. ಅಚ್ಚರಿಯೆಂದರೆ ನಂತರದ 5 ತಿಂಗಳಲ್ಲಿ 590 ಕೋಟಿ ರೂ. ವಹಿವಾಟು ದಾಖಲಾಯಿತು. ಎಂಎಸ್ ಧೋನಿ ನಮ್ಮ ಬ್ರ್ಯಾಂಡ್ ಮತ್ತು ಜಾಹೀರಾತು ರಾಯಭಾರಿಯಾದರು. ಟಿ20 ವರ್ಲ್ಡ್ ಕಪ್‌ನಲ್ಲಿ ಜಾಹೀರಾತುಗಳ ಮೂಲಕ ಮಿಂಚಿದೆವು. ಮೂರು ತಿಂಗಳಿನಲ್ಲಿ 250 ವಿತರಕರು ಮತ್ತು 35,000 ರಿಟೇಲರ್‌ಗಳ ಜಾಲ ಏರ್ಪಟ್ಟಿತು. 2011-12ರಲ್ಲಿ ಬ್ಯುಸಿನೆಸ್ 1,260 ಕೋಟಿ ರೂ.ಗೆ ವೃದ್ಧಿಸಿತು. ಆದರೆ 2012-13ರಲ್ಲಿ ಬಳಕೆಯಲ್ಲಿಲ್ಲದ ಮಾದರಿಯ ಮೊಬೈಲ್ ಫೋನ್‌ಗಳ ದಾಸ್ತಾನು ಕೈಕೊಟ್ಟಿತು. ವಹಿವಾಟು 435 ಕೋಟಿ ರೂ.ಗಳಿಗೆ ದಿಢೀರ್ ಕುಸಿಯಿತು. ಪ್ರಮಾದಗಳಿಂದ ಪಾಠ ಕಲಿತೆವು. ಇಂದು 84 ಮಾದರಿಯ ಮೊಬೈಲ್ ಫೋನ್‌ಗಳನ್ನು ಮಾರುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 600ಕೋಟಿ ರೂ. ವಹಿವಾಟಿನ ನಿರೀಕ್ಷೆ ಇದೆ. ಭಾರತೀಯ ಬ್ರ್ಯಾಂಡ್ ಸಫಲವಾಗಬೇಕಾದರೆ ಮರೆಯಲೇಬಾರದ ಸಂಗತಿ ಇದೆ. ಅದೇನೆಂದರೆ ವ್ಯಾಪಾರದ ನಂತರದ ಸೇವೆ ಉತ್ಕೃಷ್ಟವಾಗಿರಬೇಕು. ನಾವು 1 ಸಾವಿರ ಸರ್ವೀಸ್ ಕೇಂದ್ರಗಳನ್ನು ಹೊಂದಿದ್ದೇವೆ. ಇದನ್ನು 2014ರ ಏಪ್ರಿಲ್ ಹೊತ್ತಿಗೆ ಇಮ್ಮಡಿಯಾಗಿಸುವ ಗುರಿ ನಮಗಿದೆ.

2 comments: