
ಕೊನೆಗೂ ರಾಜ್ಯದ ಜನತೆ ಸಂತಸಪಡುವ ಸುದ್ದಿ ಹೊರಬಿದ್ದಿದೆ...! ಹೌದು . ನಿಮ್ಮ ಊಹೆ ನಿಜ. ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದಾರೆ. ಬಿಜೆಪಿಯ ಹಿರಿಯ ನೇತಾರ ಲಾಲ್ ಕೃಷ್ಣ ಆಡ್ವಾಣಿ ಅವರ ಮನವಿಗೆ ಓಗೊಟ್ಟು ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದಾರೆ. ಲೋಕಾಯಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕಾನೂನು ಸಚಿವ ಸುರೇಶ್ ಕುಮಾರ್ ನಡೆಸಿದ ಸಂಧಾನ ಸಫಲವಾಗಿದೆ. ಇವೆಲ್ಲದರ ಜತೆಗೆ ರಾಜ್ಯದ ಜನತೆ ಒಕ್ಕೊರಲಿನಿಂದ ಹೇಳಿದ್ದು ಒಂದೇ..ಲೋಕಾಯಕ್ತರು ರಾಜೀನಾಮೆ ನೀಡಬಾರದು..ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರೂ ಸಂತೋಷ್ ಹೆಗ್ಡೆಯವರಿಗೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಕೇಂದ್ರ ಗೃಹಸಚಿವ ಚಿದಂಬರಂ ಕೂಡ ಮನವೊಲಿಸಿದ್ದರು. ಆದರೂ ತಮ್ಮ ನಿರ್ಧಾರದಿಂದ ಹೆಗ್ಡೆ ಹಿಂದೆ ಸರಿದಿರಲಿಲ್ಲ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಎಂಬಂತೆ ಸರಕಾರಕ್ಕೀಗ ಅನ್ನಿಸಿರಬಹುದು. ಆದರೆ ಇನ್ನು ಲೋಕಾಯುಕ್ತಕ್ಕೆ ನೀಡಿರುವ ಭರವಸೆಯನ್ನು ಶೀಘ್ರವೇ ಒದಗಿಸಬೇಕಾದ ಹೊಣೆ ಸರಕಾರದ ಮೇಲಿದೆ..