Saturday 3 July 2010

ರಾಜೀನಾಮೆ ವಾಪಸ್ ಪಡೆದ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ


ಕೊನೆಗೂ ರಾಜ್ಯದ ಜನತೆ ಸಂತಸಪಡುವ ಸುದ್ದಿ ಹೊರಬಿದ್ದಿದೆ...! ಹೌದು . ನಿಮ್ಮ ಊಹೆ ನಿಜ. ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದಾರೆ. ಬಿಜೆಪಿಯ ಹಿರಿಯ ನೇತಾರ ಲಾಲ್ ಕೃಷ್ಣ ಆಡ್ವಾಣಿ ಅವರ ಮನವಿಗೆ ಓಗೊಟ್ಟು ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದಾರೆ. ಲೋಕಾಯಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕಾನೂನು ಸಚಿವ ಸುರೇಶ್ ಕುಮಾರ್ ನಡೆಸಿದ ಸಂಧಾನ ಸಫಲವಾಗಿದೆ. ಇವೆಲ್ಲದರ ಜತೆಗೆ ರಾಜ್ಯದ ಜನತೆ ಒಕ್ಕೊರಲಿನಿಂದ ಹೇಳಿದ್ದು ಒಂದೇ..ಲೋಕಾಯಕ್ತರು ರಾಜೀನಾಮೆ ನೀಡಬಾರದು..ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರೂ ಸಂತೋಷ್ ಹೆಗ್ಡೆಯವರಿಗೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಕೇಂದ್ರ ಗೃಹಸಚಿವ ಚಿದಂಬರಂ ಕೂಡ ಮನವೊಲಿಸಿದ್ದರು. ಆದರೂ ತಮ್ಮ ನಿರ್ಧಾರದಿಂದ ಹೆಗ್ಡೆ ಹಿಂದೆ ಸರಿದಿರಲಿಲ್ಲ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಎಂಬಂತೆ ಸರಕಾರಕ್ಕೀಗ ಅನ್ನಿಸಿರಬಹುದು. ಆದರೆ ಇನ್ನು ಲೋಕಾಯುಕ್ತಕ್ಕೆ ನೀಡಿರುವ ಭರವಸೆಯನ್ನು ಶೀಘ್ರವೇ ಒದಗಿಸಬೇಕಾದ ಹೊಣೆ ಸರಕಾರದ ಮೇಲಿದೆ..

6 comments:

  1. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡುವಲ್ಲಿ ಶಾಸನ ರೀತ್ಯಾ, ರಾಜ್ಯ ಸರಕಾರದ ಪಾತ್ರವೆಷ್ಟು ಹಾಗು ಕೇಂದ್ರಸರಕಾರದ ಪಾತ್ರವೆಷ್ಟು ಎನ್ನುವದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಭಾರತ ದೇಶದಲ್ಲೆಲ್ಲ ಏಕರೂಪದ ಶಾಸನ ಬರುವದು ಒಳಿತು.

    ReplyDelete
  2. ನಿಮ್ಮ ಅಭಿಮತ ಒಪ್ಪತಕ್ಕದ್ದೇ. ಥ್ಯಾಂಕ್ಸ್

    ReplyDelete
  3. ಆರು ಕೋಟಿ ಕನ್ನಡಿಗರ ಆಶೆಯಾಗಿತ್ತು -ಅವರು ರಾಜಿನಾಮೆ ಹಿಂತೆಗೆದುಕೊಂಡು ಬ್ರಷ್ಟಾಚಾರಿಗಳನ್ನು ಮಟ್ಟ ಹಾಕಬೇಕೆಂದು.
    ಆದರೆ ಯಾವದೋ ಮೂಲಭೂತವಾದಿ ನೇಪತ್ಯಕ್ಕೆ ಸರಿದ ರಾಜಕಾರಣಿಗಳ ಮಾತಿಗೊಳೆದು ತೆಗೆದುಕೊಂಡ ಅವರ ರಾಜೀನಾಮೆ ಹಿಂತೆಗೆತದ ನಿರ್ಧಾರ ಮನಸ್ಸಿಗೆ ಮುದ ನೀಡಲಿಲ್ಲ. ನನಗೇನು ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಬರವಸೆಯಿಲ್ಲ. ಯಾಕೆಂದರೆ ಆಶ್ವಾಸನೆ ಕೊಟ್ಟ ಜನಕ್ಕೆ ಆ ಅಧಿಕಾರವಿಲ್ಲ. ಅದ್ವಾನಿಯವರ ಮತ್ತು ಯೆಡ್ಯುರಪ್ಪರ ಮಾತು ನಡೆಯುವದಿಲ್ಲ. ಹಾ ಸುಷ್ಮಾ ಅಥವಾ ರೆಡ್ಡಿ ಸಹೋದರರು ಹೇಳಿದ್ದರೆ ನಂಬಬಹುದಿತ್ತು!
    ಸುನಾಥರ ಆಶಯವೂ ನನ್ನ ಆಶಯ!

    ReplyDelete
  4. ನಿಮ್ಮ ನೋವು ಪ್ರತಿಕ್ರಿಯೆಯುದ್ದಕ್ಕೂ ವ್ಯಕ್ತವಾಗುತ್ತಿದೆ. ಆದರೆ ಪ್ರಜಾಪ್ರಭುತ್ವ ಎಂಥ ಖದೀಮರಿಗೂ ಅಂತ್ಯ ಕಾಣಿಸುವ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಹೊಂದುವುದು ಹಿತ ಎಂದು ನನಗನ್ನಿಸುತ್ತದೆ. ಇನ್ನು ಹೆಗ್ಡೆಯವರು ರಾಜೀನಾಮೆ ಹಿಂತೆಗೆದುಕೊಂಡಿದ್ದಕ್ಕೆ ಬೇಸರಿಸುವ ಅಗತ್ಯವಿಲ್ಲ. ಅವರು ಕೇಳಿರುವ ಹೆಚ್ಚಿನ ಅಕಾರ ಸಿಗಲಿ, ಬಿಡಲಿ, ಕನಿಷ್ಠ ಭ್ರಷ್ಟರನ್ನು ಬಯಲಿಗೆಳೆಯುವ ಕೆಲಸವನ್ನು ಮುಂದುವರಿಸುತ್ತಾರೆ ಎಂಬುದರಲ್ಲಿ ಸಂದೇಹ ಬೇಡ.

    ReplyDelete
  5. ಕೇಶವ್, ನಿಜವನ್ನು ಹೇಳುತ್ತೇನೆ ಕೇಳಿ- ರಾಜಕಾರಣಿಗಳು ಲೋಕಾಯುಕ್ತರಿಗೆ ಆಶಯಗಳನ್ನು ಪೂರ್ತಿಗೊಳಿಸುವುದಾಗಿ ಲಿಖಿತ ಭರವಸೆ ಮತ್ತು ಕೃತಿಯಲ್ಲಿ ಜೊತೆಗೆ ಪ್ರೆಸ್ ಹೇಳಿಕೆ ಸಾರ್ವಜನಿಕರ ಎದುರು ಹೇಳಿದ ಮೇಲೆ ಲೋಕಾಯುಕ್ತರು ರಾಜೀನಾಮೆ ವಾಪಸ್ ಪಡೆಯಬಹುದಿತ್ತು, ಇದು ಅವರು 'ಒತ್ತಾಯಕ್ಕೆ ಬಸಿರಾದ ಕಥೆ' ಎನ್ನದೆ ವಿಧಿಯಿಲ್ಲ!

    ReplyDelete
  6. ಮಿತ್ರರೇ, ಇದನ್ನು ದುರಂತವೆನ್ನಬಹುದೇನೋ.. ನೋಡಿ. ಒಬ್ಬ ವ್ಯಕ್ತಿ ಎಷ್ಟೇ ಭ್ರಷ್ಟನಾಗಿದ್ದರೂ, ಶಾಸಕ, ಸಂಸದ, ಮಂತ್ರಿ ಅಥವಾ ಮುಖ್ಯಮಂತ್ರಿಯಾಗಿದ್ದರೆ ಸಾಕು, ಆತನ ವಿರುದ್ಧ ಲೋಕಾಯುಕ್ತರು ದೂರಿಲ್ಲದೆ ತನಿಖೆ ನಡೆಸುವ, ದಾಳಿ ನಡೆಸುವ ಹಾಗಿಲ್ಲ. ಹಾಗಾದರೆ ಹಿಂದಿನ ಕಾಲದ ಪಾಳೇಗಾರರಿಗೂ, ತುಂಡರಸರಿಗೂ ಈವತ್ತಿನ ಶಾಸಕರಿಗೂ ವ್ಯತ್ಯಾಸವಿಲ್ಲಂದತಾಯಿತು ಅಲ್ಲವೇ. ಆದ್ದರಿಂದ ಎಂಥ ಪ್ರತಿನಿಯನ್ನು ಆಯ್ಕೆ ಮಾಡಬೇಕು ಎನ್ನುವ ವಿವೇಚನೆ ಮತದಾರರಿಗೆ ಇರಬೇಕು. ಇಲ್ಲದಿದ್ದಲ್ಲಿ ಪಾತಕಿಗಳ ವಿಕೃತಿಗೆ ಕೊನೆಯಿರುವುದಿಲ್ಲ.

    ReplyDelete