Friday 7 January 2011

೫೦ ಸಾವಿರ ರೂ. ಬಂಡವಾಳ,ಚಾಕಲೇಟ್ ಮತ್ತು ಸುಭಾತ್ರಾ


" ಇಂಥವರೇ ಅಂತ ಇಲ್ಲ, ಯಾರೇ ಆಗಲಿ, ಬಿಸಿನೆಸ್ ಶುರು ಮಾಡ್ಬೇಕು ಎಂದು ಬಯಸಿದರೆ ತಡ ಮಾಡಬಾರದು. ಮುನ್ನುಗ್ಗಿ ಅವಕಾಶಗಳನ್ನು ಕಂಡುಕೊಳ್ಳುತ್ತ ಮುಂದುವರಿಯಬೇಕು. ಆಗ ಎಂಥ ಸವಾಲು ಕೂಡ ಕಲಿಯುವಿಕೆಯ ಭಾಗವಾಗಿ ಬಿಡುತ್ತದೆ. ಕಷ್ಟವಾಗುವುದಿಲ್ಲ..''
ಹೊಸ ದಿಲ್ಲಿಯ ಯುವ ಉದ್ಯಮಿ ಸುಭಾತ್ರಾ ಪ್ರಿಯದರ್ಶಿನಿ ಹೀಗೆನ್ನುವಾಗ ಅವರಲ್ಲಿರುವ ಆತ್ಮ ವಿಶ್ವಾಸ, ದೃಢ ನಿರ್ಧಾರ ಮತ್ತು ಛಲ ವ್ಯಕ್ತವಾಗುತ್ತದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಸುಭಾತ್ರಾ ಪ್ರಿಯದರ್ಶಿನಿ ಅವರೀಗ ಚಾಕಲೇಟ್ ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿರುವ ಉದ್ಯಮಿ. ಚಾಕ್ ಆಫ್ ದಿ ಟೌನ್ ಎಂಬುದು ಅವರ ಚಾಕಲೇಟ್ ಉದ್ದಿಮೆಯ ಹೆಸರು. ಹಾಗಂತ ವ್ಯಾಪಾರ ಆರಂಭಿಸಲು ಕೋಟಿಗಟ್ಟಲೆಯೇಕೆ, ಲಕ್ಷಗಟ್ಟಲೆ ರೂಪಾಯಿ ಕೂಡ ಬಂಡವಾಳ ಹಾಕಿಲ್ಲ. ವ್ಯಾಪಾರದ ಕುಟುಂಬದಿಂದ ಬಂದವರೂ ಅಲ್ಲ, ಆದರೆ ಕೇವಲ ೫೦ ಸಾವಿರ ರೂ.ಗಳೊಂದಿಗೆ ಚಾಕಲೇಟ್ ವ್ಯಾಪಾರ ಶುರು ಮಾಡಿರುವ ದಿಟ್ಟೆ ಪ್ರಿಯದರ್ಶಿನಿ.
ಉದ್ಯಮಿಯಾಗುವ ಆಸೆ, ನಿರಂತರ ಕಲಿಕೆ, ವೆಬ್‌ಸೈಟ್, ಫೇಸ್‌ಬುಕ್ ಮತ್ತು ೫೦ ಸಾವಿರ ರೂ. ಬಂಡವಾಳದಿಂದ ಸುಭಾತ್ರಾ ಇದೀಗ ಕನಸನ್ನು ನನಸಾಗಿಸಿದ್ದಾರೆ. ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಸಾಹಸ ಮತ್ತು ಮುಂದಿನ ಗುರಿಯನ್ನು ವಿವರಿಸಿದ್ದಾರೆ. ವಿಶೇಷವೇನೆಂದರೆ ಚೆನ್ನೈ ಮೂಲದ ಸುಭಾತ್ರಾ ಪ್ರಿಯದರ್ಶಿನಿ ಚಾಕಲೇಟ್ ಉದ್ದಿಮೆಯ ಬಗ್ಗೆ ಆರಂಭಿಕ ಕಲಿಕೆ ಪಡೆದದ್ದು ಬೆಂಗಳೂರಿನ ಐಐಎಂನಲ್ಲಿ. ಕಳೆದ ವರ್ಷ ಐಐಎಂ ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಗಳಿಗೆ ಸಿದ್ಧಪಡಿಸಿರುವ ಎರಡು ತಿಂಗಳಿನ ಕೋರ್ಸ್‌ಗೆ ಸೇರ್ಪಡೆಯಾದರು. ಕೋರ್ಸ್ ಶುಲ್ಕ ಸೇರಿ ಅವರಿಗೆ ತಗುಲಿದ ಖರ್ಚು ೫೦ ಸಾವಿರ ರೂ. ಆದರೆ ಇದು ಅವರಿಗೆ ನಿರೀಕ್ಷೆಗೂ ಮೀರಿದ ಪ್ರತಿಫಲ ಕೊಟ್ಟಿತು. ಹಲವಾರು ಸಮಾನಮನಸ್ಕ ಮಹಿಳೆಯರ ಪರಿಚಯವೂ ಆಯಿತು. ಆದರೆ ಪತಿಗೆ ಉದ್ಯೋಗ ನಿಮಿತ್ತ ದಿಲ್ಲಿಗೆ ವಲಸೆಯಾದ್ದರಿಂದ ಇವರು ಹುದ್ದೆಗೆ ವಿದಾಯ ಹೇಳಿ ದಿಲ್ಲಿಗೆ ತೆರಳಬೇಕಾಯಿತು. ಆದರೆ ಅಲ್ಲಿ ಸುಮ್ಮನಿರದೆ ಉದ್ಯಮಿಯಾಗುವ ಹಂಬಲದಿಂದ ಅನುಷ್ಠಾನಕ್ಕೆ ಇಳಿದೇ ಬಿಟ್ಟರು.
ಐಐಎಂ ಬೆಂಗಳೂರಿನಲ್ಲಿ ಚಾಕಲೇಟ್ ಉದ್ದಿಮೆಯ ಒಳ ಹೊರಗಿನ ಬಗ್ಗೆ ಶಿಕ್ಷಣ ಪಡೆದ ಸುಭಾತ್ರಾ ದಿಲ್ಲಿಯಲ್ಲಿ ಪ್ರಯೋಗಕ್ಕಿಳಿದರು. ಈವತ್ತು ಏಕಾಂಗಿಯಾಗಿಯೇ ೧೫ ಭಿನ್ನ ಬಗೆಯ ಚಾಕಲೇಟ್‌ಗಳನ್ನು ಅವರು ತಯಾರಿಸುತ್ತಾರೆ. ಆರಂಭದಲ್ಲಿ ದಿನಕ್ಕೆ ೨ ಕೆಜಿ ಚಾಕಲೇಟ್ ಮಾಡುತ್ತಿದ್ದರಂತೆ. ಈಗ ದೇಶಾದ್ಯಂತ ಬೇಡಿಕೆ ಬರುತ್ತಿದೆ. ಹೀಗಾಗಿ ಈ ಗುಡಿ ಕೈಗಾರಿಕೆಯನ್ನು ವಿಸ್ತರಿಸುವ ಆಲೋಚನೆ ಅವರಲ್ಲಿದೆ. ಒಣಗಿದ ಹಣ್ಣುಗಳು, ಬೀಜಗಳು, ತೆಂಗಿನಕಾಯಿ ಮುಂತಾದ ಪದಾರ್ಥಗಳನ್ನು ಉಪಯೋಗಿಸಿ ಚಾಕಲೇಟ್ ಉತ್ಪಾದಿಸುತ್ತಾರೆ. ಫೇಸ್‌ಬುಕ್, ತಮ್ಮದೇ ವೆಬ್‌ಸೈಟ್ ಇರುವುದರಿಂದ ದೇಶದ ನಾನಾ ಕಡೆಗಳಿಂದ ಬೇಡಿಕೆ ಬರುತ್ತಿದೆ. ಗ್ರಾಹಕರ ಸಂಪರ್ಕ ಸಾಧ್ಯವಾಗುತ್ತದೆ. ಇವೆರಡೂ ಅತ್ಯಂತ ಉಪಕಾರಿ ಎನ್ನುತ್ತಾರೆ ಸುಭಾತ್ರಾ.
ಸುಭಾತ್ರಾ ಅವರ ಚಾಕ್ ಆಫ್ ದಿ ಟೌನ್‌ನಲ್ಲಿ ೭ ರೂ.ಗಳ ಚಾಕಲೇಟ್ ಸಿಗುತ್ತದೆ. ಮೊಟ್ಟೆಯನ್ನು ಬಳಸದ ಕೇಕ್ ದೊರೆಯುತ್ತದೆ. ವಹಿವಾಟು ವಿಸ್ತರಣೆ ಸಲುವಾಗಿ ಕೆಲವರಿಗೆ ಉದ್ಯೋಗ ಕೊಡಲೂ ಸುಭಾತ್ರಾ ಮುಂದಾಗಿದ್ದಾರೆ.

5 comments: