Wednesday 4 November 2009

ಬಂಗಾರ ದುಬಾರಿಯಾದಾಗ ? ೫೦೦ ರೂ. ಕಂತಿನಲ್ಲಿ ಕನಸು ನನಸು

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕಿರುವ ಮಹತ್ವವನ್ನು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯವಿಲ್ಲ. ಅಂತಹ ಬಂಗಾರ ಕೇವಲ ಸೌಂದರ್ಯವರ್ಧಕ ಸಾಧನವಾಗಿಯೂ ಉಳಿದಿಲ್ಲ. ಉಳಿತಾಯ ಹಾಗೂ ಹೂಡಿಕೆಯ ಸುರಕ್ಷಿತ ವಿಧಾನವಾಗಿ ಕೂಡ ಆಕರ್ಷಿಸುತ್ತಿದೆ. ಒಂದು ವೇಳೆ ಭಾರತದಲ್ಲಿ ಚಿನ್ನದ ಕೊರತೆ ತೀವ್ರವಾಗಿದ್ದಲ್ಲಿ, ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ದೇಶ ಕಂಗಾಲಾಗುತ್ತಿತ್ತು. ಹೀಗಿದ್ದರೂ ಚಿನ್ನದ ಬೆಲೆ ಪ್ರತಿ ೧೦ ಗ್ರಾಮ್‌ಗೆ ೧೬,೪೫೦ ರೂ. ಗಡಿ ದಾಟಿದೆ. ಹೀಗಾಗಿ ಚಿನ್ನದ ಖರೀದಿಗೆ ಚಿಂತಿಸುವವರೂ ಹೆಚ್ಚುತ್ತಿದ್ದಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚಿನ್ನವನ್ನು ನಿಮ್ಮದಾಗಿಸಲು ಸುರಕ್ಷಿತ ಹಾಗೂ ಸರಳ ಅನುಕೂಲ ಇದೆ. ಪ್ರತಿ ತಿಂಗಳು ಸುಲಭ ಕಂತುಗಳ ಮೂಲಕ ಬಂಗಾರದ ಕನಸನ್ನು ನನಸು ಮಾಡಿಕೊಳ್ಳಬಹುದು. ಯಾರ್‍ಯಾರೋ ಕೈಗೆ ದುಡ್ಡು ಕೊಟ್ಟು ಮೋಸ ಹೋಗುವುದರ ಬದಲಿಗೆ ಬ್ರಾಂಡ್ ಕಂಪನಿಗಳ ಕಂತಿನ ಯೋಜನೆಯಲ್ಲಿ ಸೇರಿಕೊಳ್ಳಬೇಕು. ಅಷ್ಟೇ. ಹಾಗಾದರೆ ಚಿನ್ನದ ಮಾಸಿಕ ಕಂತು ಯೋಜನೆಗಳು ಹೇಗಿರುತ್ತವೆ ? ಅವುಗಳಲ್ಲಿ ಏನೇನು ಸೌಲಭ್ಯ ಸಿಗುತ್ತವೆ ? ಉದಾಹರಣೆಗೆ ಮಲಬಾರ್ ಗೋಲ್ಡ್ ಕಂಪನಿಯ ಯೋಜನೆಯನ್ನು ನೋಡೋಣ. ಐನೂರು ರೂ.ಗಳಿಂದ ಕಂತು ಆರಂಭವಾಗುತ್ತದೆ. ಯಾರು ಬೇಕಾದರೂ ಕಂಪನಿಯ ಶೋ ರೂಮ್‌ಗೆ ಹೋಗಿ ಎರಡು ಪಾಸ್‌ಪೋರ್ಟ್ ಆಕಾರದ ಭಾವ ಚಿತ್ರ, ವಿಳಾಸ ಕೊಟ್ಟು ಯೋಜನೆಗೆ ಸೇರಿಕೊಳ್ಳಬಹುದು. ನಿಮಗೆ ಗುರುತಿನ ಕಾರ್ಡ್, ರಸೀದಿ ಕೊಡುತ್ತಾರೆ. ೧೮ ತಿಂಗಳಿಗೆ ಕಂತಿನ ಮೊತ್ತ ೯ ಸಾವಿರ ರೂ. ಆಗುತ್ತದೆ. ವರ್ಷಕ್ಕೆ ಶೆ. ೬ರಷ್ಟು ಬೋನಸ್‌ನ್ನು ಕೂಡ ಮಲಬಾರ್ ನೀಡುತ್ತದೆ. ೯ ಸಾವಿರ ರೂ.ಗೆ ( ಬೋನಸ್ ೪೨೭.೫ ರೂ.) ನಿಮಗೆ ಬೇಕಾದ ಉಂಗುರ ಅಥವಾ ಚೈನ್ ಖರೀದಿಸಬಹುದು. ಅಥವಾ ೨೪ ತಿಂಗಳಿಗೆ ಮುಂದುವರಿಸಿದರೆ ೧೨ ಸಾವಿರ ರೂ. (೪೨೭.೫ ರೂ. ಬೋನಸ್ ) ಬೆಲೆಯ ಬಂಗಾರ ನಿಮ್ಮದಾಗುತ್ತದೆ. ಬಜೆಟ್‌ಗೆ ತಕ್ಕಂತೆ ೫೦೦, ೧೦೦೦,೨೫೦೦, ೫೦೦೦ ರೂ. ಕಂತುಗಳಲ್ಲಿ ಸೇರಿಕೊಳ್ಳಬಹುದು. ಚಿನ್ನದ ನಾಣ್ಯ : ನಾನಾ ಬ್ಯಾಂಕ್‌ಗಳು, ಆಭರಣ ಕಂಪನಿಗಳು, ಅಷ್ಟೇಕೆ ಅಂಚೆ ಇಲಾಖೆ ಕೂಡ ಈವತ್ತು ಬಂಗಾರದ ನಾಣ್ಯಗಳನ್ನು ಮಾರಾಟ ಮಾಡುತ್ತಿವೆ. ಇವುಗಳೂ ಹೂಡಿಕೆಗೆ ಸುರಕ್ಷಿತ ವಿಧಾನ. ಬಂಗಾರದ ನಾಣ್ಯಗಳನ್ನು ಪಡೆದ ನಂತರ ಮಜೂರಿ ಶುಲ್ಕ ( ಮೇಕಿಂಗ್ ಚಾರ್ಜ್) ಅಂತ ಬೇರೆ ಕೊಡಬೇಕಾದ ಅಗತ್ಯ ಇರುವುದಿಲ್ಲ. ಚಿನ್ನ ಲೋಪವಾಗುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ನಾಣ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳನ್ನೂ ಕಂತಿನಲ್ಲಿ ಪಡೆಯಬಹುದು. ಆದ್ದರಿಂದ ಕೈಯಲ್ಲಿ ದುಡ್ಡಿಲ್ಲ ಅಂತ ಚಿನ್ನ ಖರೀದಿಸುವ ಯೋಜನೆಯನ್ನು ಕೈಬಿಡಬೇಡಿ. ಕಂತಿನ ಮಾರ್ಗದಲ್ಲಿ ಹನಿಗೂಡಿ ಹಳ್ಳವಾಗುತ್ತದೆ. ಬಂಗಾರ ನಿಮ್ಮದಾಗುತ್ತದೆ.
(ವಿಜಯಕರ್ನಾಟಕದಲ್ಲಿ ಪ್ರಕಟಿತ ವರದಿ )

No comments:

Post a Comment