ಇವತ್ತು ಯಾವುದೇ ಗಲ್ಲಿಯ ಅಂಗಡಿಗಳಿಂದ ಶಾಪಿಂಗ್ ಮಾಲ್ ತನಕ ಎಲ್ಲೆಡೆಗಳಲ್ಲಿ ಸದಾ ಲಭ್ಯವಿರುವ ಪೆಪ್ಸಿ , ಕೋಕಾಕೋಲ, ಬೂಸ್ಟ್, ಬೋರ್ನ್‌ವೀಟಾ,ಕಾಫಿ, ಟೀ ಪೌಡರ್, ಮೆಕ್‌ಡೊನಾಲ್ಡ್ ಕೆಚಪ್, ಹಾರ್ಲಿಕ್ಸ್, ಜಿಆರ್‌ಬಿ ತುಪ್ಪ, ಮಿಲ್ಮಾದ ನಾನಾ ಪಾನೀಯದ ಬಾಟಲಿಗಳನ್ನು ಗಮನಿಸಿ. ಎಲ್ಲವೂ ಪ್ಲಾಸ್ಟಿಕ್‌ಮಯ. ಮದ್ಯದ ಬಾಟಲಿಗಳೂ ಕುಪ್ಪಿಯದ್ದಲ್ಲ !ಈ ಹಿಂದೆ ಗಾಜಿನ ಬಾಟಲಿಗಳಲ್ಲಿರುತ್ತಿದ್ದ ಪಾನೀಯಗಳೆಲ್ಲ ನಾನಾ ಆಕಾರ, ಗಾತ್ರ, ಬಣ್ಣಗಳಲ್ಲಿ ಪ್ಲಾಸ್ಟಿಕ್‌ನತ್ತ ತಿರುಗಿವೆ. ಟಿನ್ನುಗಳೂ ಮಂಗಮಾಯ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬುವ ಪಾನೀಯ, ಪುಡಿ, ಇತರ ಆಹಾರ ಪದಾರ್ಥಗಳೂ ಹಾಳಾಗದೆ ಸುದೀರ್ಘಾವ ಉಳಿದುಕೊಳ್ಳುತ್ತಿವೆ. ಇದು ಹೇಗೆ ಸಾಧ್ಯವಾಯಿತು ? ಇದರಲ್ಲಿಯೂ ಆಹಾರ ಹಾಳಾಗುವುದಿಲ್ಲ ಯಾಕೆ ? ಅಂದ ಹಾಗೆ ಪೆಪ್ಸಿಯ ಬಾಟಲಿಯ ಮೂಲ ಸ್ವರೂಪ ಒಂದು ಸಣ್ಣ ಟ್ಯೂಬಿನ ಆಕಾರದಲ್ಲಿರುತ್ತೆ ! ಬಲೂನಿಗೆ ಗಾಳಿ ತುಂಬುವಂತೆ ಇದನ್ನು ಯಂತ್ರಗಳಲ್ಲಿ ಸಾಲಾಗಿಟ್ಟು ಬ್ಲೋ ಮಾಡಿದಾಗ ಕ್ಷಣಾರ್ಧದಲ್ಲಿ ಬಾಟಲಿಯ ಆಕಾರಕ್ಕೆ ತಿರುಗುತ್ತದೆ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಮಂಜುಶ್ರೀ ಪ್ಯಾಕೇಜಿಂಗ್ ಕಂಪನಿಯಲ್ಲಿ ಇದನ್ನೆಲ್ಲ ನೋಡಬಹುದು. ಪ್ಯಾಕೇಜಿಂಗ್ ಉದ್ಯಮದ ಇತಿಹಾಸವನ್ನು ಬಿಂಬಿಸುವ ಮ್ಯೂಸಿಯಂ ಕೂಡ ಕಂಪನಿಯ ಆವರಣದಲ್ಲಿದೆ. ಸುಮಾರು ೪ ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಪ್ಲಾಸಿಕ್ ಬಾಟಲಿಗಳ ಲೈಬ್ರೆರಿ ಕೂಡ ಇಲ್ಲಿದೆ ! ನಿಮಗೆ ಇಷ್ಟವಾದ ಬಾಟಲಿಯನ್ನು ಆರ್ಡರ್ ಮಾಡಬಹುದು.
ಅಸ್ಸಾಂನ ಗುವಾಹಟಿಯಲ್ಲಿ ೧೯೮೩ರಲ್ಲಿ ವಿಮಲ್ ಕೇಡಿಯಾ ಹಾಗೂ ಸೋದರ ಸುರೇಂದ್ರ ಕೇಡಿಯಾ ಸಣ್ಣ ಪ್ಯಾಕೇಜಿಂಗ್ ಘಟಕ ತೆರೆದರು. ಚಹಾ ಗಿಡಗಳ ಪೂರೈಕೆಗೆ ಬೇಕಾದ ಲಕೋಟೆಯನ್ನು ಇವರು ತಯಾರಿಸಿ ಮಾರುತ್ತಿದ್ದರು. ಆದರೆ ಉಗ್ರರ ಉಪಟಳಕ್ಕೆ ಬೇಸತ್ತು ೧೯೯೪ರಲ್ಲಿ ಬೆಂಗಳೂರಿಗೆ ಬಂದರು. ಇಲ್ಲಿ ಕ್ಲಿಕ್ಕಾಯಿತು ಮಂಜುಶ್ರೀ. ನಿರಂತರ ಸಂಶೋಧನೆ, ಆರ್ಥಿಕ ಶಿಸ್ತು, ಪರಿಶ್ರಮದಿಂದ ಇವತ್ತು ಕಂಪನಿ ೧೫೦ ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುತ್ತಿದೆ. ಬೆಂಗಳೂರಿನಲ್ಲಿ ವಿಮಲ್ ಕೇಡಿಯಾ ೫ ಕೋಟಿ ರೂ.ಗಳನ್ನು ಹೂಡಿದ್ದರು. ಮಂಜುಶ್ರೀ ಪ್ರತಿ ವರ್ಷ ೨೦ ಸಾವಿರ ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಾಟಲಿಗಳನ್ನು ಕಂಪನಿ ಮಾರಾಟ ಮಾಡುತ್ತಿದೆ ಎಂದರೆ ಊಹಿಸಿ.
ಹೀಗೆ ಕಂಪನಿಗಳೆಲ್ಲ ಗಾಜು, ಟಿನ್ನುಗಳನ್ನು ಬಿಟ್ಟು ಪ್ಲಾಸ್ಟಿಕ್ ಬಾಟಲಿಗಳ ಮೊರೆ ಹೋಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಇವುಗಳಿಗೆ ತಗಲುವ ಖರ್ಚು ಕಡಿಮೆ. ಎರಡನೆಯದಾಗಿ ಗಾಜಿನಂತೆ ಒಡೆಯುವುದಿಲ್ಲ. ಹೀಗಾಗಿ ಸಾಗಣೆ ಸುಲಭ. ಪ್ರೀ ಫಾರ್ಮ್ ಹಂತದಲ್ಲಿ ಸಣ್ಣ ಟ್ಯೂಬ್‌ಗಳಂತಿರುವ ಬಾಟಲಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡೊಯ್ಯಬಹುದು. ಕೊನೆಯದಾಗಿ ಬಾಟಲಿಯಲ್ಲಿನ ೬ ಲೇಯರ್ ತಂತ್ರಜ್ಞಾನದ ಪರಿಣಾಮವಾಗಿ ಇವುಗಳಲ್ಲಿಡುವ ಆಹಾರ ಬೇಗನೆ ಕೆಡುವುದಿಲ್ಲ. ಯಾಕೆಂದರೆ ಈ ಬಾಟಲಿಯೊಳಗೆ ತೇವಾಂಶ ಹಾಗೂ ಗಾಳಿಯಾಡಲು ಅವಕಾಶ ಇರುವುದಿಲ್ಲ.
ಸಣ್ಣ ಟ್ಯೂಬಿನಾಕಾರದ ಪ್ಲಾಸ್ಟಿಕ್‌ನ್ನು ಪೆಟ್ ಪ್ರೀ ಫಾರ್ಮ್ ಎನ್ನುತ್ತಾರೆ. ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸುಲಭವಾಗಿ ತಂಪು ಪಾನೀಯ ಕಂಪನಿಗಳಿಗೆ ಸುಲಭವಾಗಿ ಸಾಗಿಸಬಹುದು. ಹಾಗೂ ಅಲ್ಲಿ ಈ ಟ್ಯೂಬ್‌ಗಳನ್ನು ೨ ಹಂತಗಳಲ್ಲಿ ಬ್ಲೋ ಮಾಡಿದಾಗ ಬಾಟಲಿಯಾಕಾರ ತಾಳುತ್ತದೆ. ನಂತರ ಬಾಟಲಿಯ ಮೇಲಿನ ಚಿತ್ರ, ಜಾಹೀರಾತುಗಳನ್ನು ಸಹ ಯಂತ್ರದ ಮೂಲಕ ಅಂಟಿಸುತ್ತಾರೆ. ಗಾಜಿನ ಬಾಟಲಿಯಾದರೆ ಹೀಗೆ ಊದಿಸಿಕೊಳ್ಳಲು ಅಸಾಧ್ಯ. ಅಲ್ಲದೆ ಸಾಗಣೆಯ ವೇಳೆ ಹಾನಿಯಾಗುವ ಸಾಧ್ಯತೆ ಹೆಚ್ಚು. ೧೫ ಎಂಎಲ್‌ನಿಂದ ೧೫ ಲೀಟರ್ ತನಕದ ಬಾಟಲಿಗಳನ್ನು ಕಂಪನಿ ಲೀಲಾಜಾಲವಾಗಿ ಉತ್ಪಾದಿಸುತ್ತಿದೆ. ಇದಕ್ಕೆ ಬೇಕಾದ ಕಚ್ಚಾ ವಸ್ತುವನ್ನು ದೂರದ ಗುಜರಾತ್‌ನಿಂದ ರಿಲಯನ್ಸ್ ಕಂಪನಿ ಒದಗಿಸುತ್ತದೆ. ಹೇಗಿದೆಯಲ್ಲವೇ ಪ್ಯಾಕೇಜಿಂಗ್ ಮ್ಯಾಜಿಕ್ !
ಕೇಶವ ಪ್ರಸಾದ್.ಬಿ

No comments:
Post a Comment