Sunday 22 November 2009

ಐಟಿ ಈಸ್ ಇನ್ ಮೈ ಬ್ಲಡ್- ಸುಹಾಸ್ ಗೋಪಿನಾಥ್

ಸುಹಾಸ್ ಗೋಪಿನಾಥ್ !
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೆಲವರಿಗೆ ಈ ಹೆಸರು ಪರಿಚಿತ. ಅಪ್ಪಟ ಕನ್ನಡಿಗ ಸುಹಾಸ್‌ಗೆ ಈಗ ಕೇವಲ ೨೩ರ ಹರೆಯ. ಮೀಸೆ ಇನ್ನೂ ಬಲಿಯದ ಪ್ರಾಯ. ಆದರೆ ಈತನ ರಕ್ತದಲ್ಲೇ ಮಾಹಿತಿ ತಂತ್ರಜ್ಞಾನ ಕರಗತವಾಗಿದೆ.
ಬೆಂಗಳೂರಿನ ಮತ್ತಿಕೆರೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಈ ಹುಡುಗ ಗ್ಲೋಬಲ್ಸ್ ಎಂಬ ಐಟಿ ಬಹುರಾಷ್ಟ್ರೀಯ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ. ಅಮೆರಿಕ, ಕೆನಡಾ, ಬಹರೇನ್, ಜರ್ಮನಿ, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ ಹನ್ನೊಂದು ರಾಷ್ಟ್ರಗಳಲ್ಲಿ ಈ ಕಂಪನಿಯ ವಹಿವಾಟು ನಡೆಯುತ್ತಿದೆ !
ನೀವು ನಂಬುತ್ತೀರಾ..ವಿಶ್ವ ಬ್ಯಾಂಕ್‌ನ ಆರ್ಥಿಕ ಸಲಹಾ ಮಂಡಳಿಯಲ್ಲಿನ ಏಕೈಕ ಭಾರತೀಯ ಹಾಗೂ ಕಿರಿಯ ಸದಸ್ಯ ಈ ಹೈದ. ಆಫ್ರಿಕಾದ ಬಡ ರಾಷ್ಟ್ರಗಳು ಸೇರಿದಂತೆ ಹಿಂದುಳಿದ ದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸಬಹುದು ಎಂಬುದರ ಬಗ್ಗೆ ಸುಹಾಸ್ ಜತೆ ವಿಶ್ವ ಬ್ಯಾಂಕ್ ಸಮಾಲೋಚನೆ ನಡೆಸುತ್ತದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೂಡ ಸುಹಾಸ್ ಸದಸ್ಯ. ಮೊನ್ನೆ ದಿಲ್ಲಿಯಲ್ಲಿ ನಡೆದ ಭಾರತೀಯ ಆರ್ಥಿಕ ಶೃಂಗದಲ್ಲಿ ಕೂಡ ಭಾಗವಹಿಸಿದ್ದಾನೆ. ಪೆಪ್ಸಿಕೊದ ಸಿಇಒ ಇಂದ್ರಾ ನೂಯಿ ಸೇರಿದಂತೆ ಘಟಾನುಘಟಿಗಳನ್ನು ಭೇಟಿಯಾಗಿದ್ದಾನೆ. ಇನೋಸಿಸ್‌ನ ಮುಖ್ಯ ಮಾರ್ಗದರ್ಶಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಹಾಸ್ ನಡುವೆ ನಿಯಮಿತವಾಗಿ ಇ-ಮೇಲ್ ಸಂವಹನ ನಡೆಯುತ್ತದೆ.
ಸುಹಾಸ್ ತಂದೆ ಗೋಪಿನಾಥ್ ರಕ್ಷಣಾ ಇಲಾಖೆಯಲ್ಲಿ ಅಕಾರಿಯಾಗಿದ್ದವರು. ಇನ್ನೂ ೧೬ರ ಬಾಲಕನಾಗಿದ್ದಾಗಲೇ ಹೆತ್ತವರ ಮಾರ್ಗದರ್ಶನದಲ್ಲಿ ಅಮೆರಿಕಕ್ಕೆ ತೆರಳಿ, ಸ್ನೇಹಿತರನ್ನು ಸಂಪಾದಿಸಿ ಅಲ್ಲಿನ ಮುಕ್ತ ವಾತಾವರಣದಲ್ಲಿ ಈ ಕಂಪನಿಯನ್ನು ಅಸ್ತಿತ್ವಕ್ಕೆ ತಂದ ಸುಹಾಸ್‌ನ ಯಶೋಗಾಥೆ ನಿಜಕ್ಕೂ ಅಚ್ಚರಿಯ ಸರಮಾಲೆ. ಈ ಹುಡುಗ ಮತ್ತೊಬ್ಬ ಎನ್.ಆರ್. ನಾರಾಯಣಮೂರ್ತಿಯಾಗುವ ದಿನಗಳು ದೂರವಿಲ್ಲ ಎಂದು ಅನ್ನಿಸಲು ಹಲವು ಕಾರಣಗಳಿವೆ. ಮೂರ್ತಿಯವರಂತೆ ಇವನದ್ದೂ ಹೋರಾಟದ ಹಾದಿ. ೧೭ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಸಿಇಒ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಸುಹಾಸ್, ನಂತರ ಕೂಡ ಹಿಂದೆ ಬಿದ್ದಿಲ್ಲ. ಮುಂದಿನ ವರ್ಷ ಮತ್ತೊಂದು ಕಂಪನಿಯ ಸ್ಥಾಪನೆಗೆ ಮುಂದಾಗಿದ್ದಾನೆ. ಯಾರಿಗಾದರೂ ಒಂದು ಕ್ಷಣ ನಂಬಲೂ ಕಷ್ಟವಾಗುವ, ಆದರೆ ಅಷ್ಟೇ ಸತ್ಯವಾಗಿರುವ ಸಾಧನೆ ಈ ಹುಡುಗನಿಂದ ಹೇಗೆ ಸಾಧ್ಯವಾಯಿತು ?
ಆಗ ಸುಹಾಸ್‌ಗೆ ೧೩ ವರ್ಷವಾಗಿತ್ತು. ಅಣ್ಣ ಶ್ರೇಯಸ್ ಗೋಪಿನಾಥ್ ಆಗಾಗ್ಗೆ ಮನೆಯ ಪಕ್ಕದ ಸೈಬರ್ ಕೆಫೆಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ಕಂಪ್ಯೂಟರ್ ಇರಲಿಲ್ಲ. ಈಗಿನಂತೆ ಇಂಟರ್‌ನೆಟ್ ಅಗ್ಗವಾಗಿರಲಿಲ್ಲ. ಗಂಟೆಗೆ ೧೦೦ ರೂ. ಶುಲ್ಕವಾಗುತ್ತಿತ್ತು. ಅಣ್ಣನೊಟ್ಟಿಗೆ ತಾನೂ ಇ-ಮೇಲ್ ಎಲ್ಲ ಮಾಡಿಕೊಂಡ ಹುಡುಗನಿಗೆ ಕ್ರಮೇಣ ನೆಟ್‌ಲೋಕ ಕೈ ಬೀಸಿ ಕರೆಯಿತು.
ವೆಬ್‌ಸೈಟ್ ಮಾಡೋದು ಹೇಗೆ ? ಇದರ ಮೂಲಕ ಹಣ ಗಳಿಸುವುದು ಹೇಗೆ ? ಎಂದೆಲ್ಲ ಇ-ಕಾಮರ್ಸ್ ಬಗ್ಗೆ ಬಾಲಕ ಕಲಿಯಲು ಆಸಕ್ತಿ ವಹಿಸಿದ. ಇಂಟರ್‌ನೆಟ್ ದುಬಾರಿಯಾದಾಗ ಕೆಫೆಯ ಮಾಲೀಕನೊಡನೆ ಚರ್ಚಿಸಿ, ಬಿಡುವಿನ ವೇಳೆ ತಾನೇ ಕೆಫೆಯನ್ನು ನೋಡಿಕೊಂಡ. ಆದಾಯ ಹೆಚ್ಚುವುದಾದರೆ ಯಾರು ಬೇಡ ಎನ್ನುತ್ತಾರೆ ? ಇತ್ತ ಸುಹಾಸ್‌ಗೂ ಉಚಿತವಾಗಿ ಇಂಟರ್‌ನೆಟ್ ಲೋಕವನ್ನು ಹೊಕ್ಕುವ ಅವಕಾಶ ಸಿಕ್ಕಿತು. ಕೂಲ್ ಹಿಂದುಸ್ತಾನ್ ಡಾಟ್‌ಕಾಮ್ ಎಂಬ ವೆಬ್‌ಸೈಟ್ ಯೋಜನೆಯನ್ನು ೧೪ನೇ ಪ್ರಾಯದಲ್ಲಿ ಸುಹಾಸ್ ನಿರ್ಮಿಸಿದಾಗ, ವಿಶ್ವದ ಅತ್ಯಂತ ಕಿರಿಯ ವೆಬ್‌ಸೈಟ್ ಡಿಸೈನರ್ ಎಂಬ ಹೆಗ್ಗಳಿಕೆ ಬಂತು. ಅನಂತರ ಅಮೆರಿಕದ ಕಂಪನಿಯೊಂದರಿಂದ ಸುಹಾಸ್‌ಗೆ ಆಹ್ವಾನ ಸಿಕ್ಕಿತು. ಭಾರತದಲ್ಲಿ ಸ್ವಂತ ಐಟಿ ಕಂಪನಿ ತೆರೆಯಬಹುದಲ್ಲವೇ ಎಂಬ ಯೋಚನೆ ಅಲ್ಲಿಯೇ ಹೊಳೆಯಿತು. ಆದರೆ ಭಾರತದಲ್ಲಿ ಕಾನೂನು ಪ್ರಕಾರ ಕಂಪನಿ ಸ್ಥಾಪಿಸಬೇಕಾದರೆ ೧೮ ವರ್ಷ ಕಡ್ಡಾಯವಾಗಿ ಭರ್ತಿಯಾಗಲೇ ಬೇಕು. ಹೀಗಾಗಿ ಅಮೆರಿಕದಲ್ಲೇ ಸುಹಾಸ್ ಕಂಪನಿ ಆರಂಭಿಸಿದ. ಭಾರತಕ್ಕೆ ಮರಳಿ ವ್ಯಾಪಾರ ಮುಂದುವರಿಸಿದ. ಹೆಚ್ಚಿನ ವಹಿವಾಟುಗಳೆಲ್ಲ ಅಂತರ್ಜಾಲದ ಮೂಲಕವೇ ನಡೆಯುತ್ತಿತ್ತು. ಐಟಿಗಿರುವ ಬಹುದೊಡ್ಡ ಅನುಕೂಲವೇ ಇದು. ಎಷ್ಟೋ ಸಲ ಗ್ರಾಹಕರು ಸುಹಾಸ್ ಧ್ವನಿ ಕೇಳಿ, ಬಾಲಕನ ಧ್ವನಿಯಂತಿದೆಯಲ್ಲವೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದರಂತೆ. ಒಂದು ಕಂಪನಿಯ ಸಿಇಒ ಎಂದರೆ ಯಾರೂ ನಂಬುತ್ತಿರಲಿಲ್ಲ. ಆದರೆ ‘ ನೀವು ನನ್ನ ಸೇವೆಯನ್ನು ಗಮನಿಸಿ, ನಂತರ ಹೇಳಿ ಎಂದು ಒಪ್ಪಿಸುವ ಜಾಣ್ಮೆ ಸುಹಾಸ್‌ನಲ್ಲಿತ್ತು.
ಕಂಪನಿಯ ವಹಿವಾಟು ವಿಸ್ತರಿಸಿದಂತೆ ಬಿಡುವು ಸಿಗದಾಯಿತು. ಮಾಹಿತಿ ತಂತ್ರಜ್ಞಾನದಲ್ಲಿ ೬ನೇ ಸೆಮಿಸ್ಟರ್ ನಂತರ ಓದು ಮುಂದುವರಿಸಲು ಕಷ್ಟವಾಯಿತು. ನಂತರ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದ ಮೂಲಕ ಹಾರ್ವರ್ಡ್ ವಿಶ್ವ ವಿದ್ಯಾಲಯದಿಂದ ವಿಶೇಷ ಅರ್ಹತೆಯ ಮೇರೆಗೆ ಡಿಪ್ಲೊಮಾ ಪದವಿಯನ್ನು ಸುಹಾಸ್ ಪೂರೈಸಿದ್ದಾನೆ. ಗ್ಲೋಬಲ್ಸ್ ಕಂಪನಿಯಲ್ಲಿ ನೂರಾರು ಮಂದಿ ಟೆಕ್ಕಿಗಳಿದ್ದಾರೆ. ಬಹುತೇಕ ಮಂದಿ ೨೦-೨೫ ವಯಸ್ಸಿನ ಎಳೆಯರು.
ಭಾರತದಲ್ಲಿ ಉದ್ಯಮಶೀಲತೆ ಅಭಿವೃದ್ಧಿಯಾಗಬೇಕಾದರೆ ಬಾಲ್ಯದಿಂದಲೇ ಉತ್ತೇಜನ ಸಿಗಬೇಕು. ಹೆತ್ತವರಿಂದ, ಸಮಾಜದಿಂದ, ಶೈಕ್ಷಣಿಕ ವಲಯದಿಂದ, ಮಾಧ್ಯಮಗಳಿಂದ ಪ್ರೋತ್ಸಾಹ ಸಿಗಬೇಕು. ಭಾರತೀಯರು ಉದ್ದಿಮೆಯಲ್ಲಿ ಸೋಲುಗಳನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕು. ಒಂದು ದೃಷ್ಟಿಕೋನ ಇರಬೇಕು. ಕಠಿಣ ಪರಿಶ್ರಮದ ಜತೆಗೆ ಕೌಶಲ್ಯಯುಕ್ತ ದುಡಿಮೆಯೂ ಆಗಬೇಕು. ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಹೊರಡುವವರಿಗೆ ಅನುಕೂಲವಾಗುವಂತೆ ನಿಜವಾದ ಏಕ ಗವಾಕ್ಷಿ ಯೋಜನೆ ಜಾರಿಯಾಗಬೇಕು. ಎಷ್ಟೋ ಸಲ ಕಾಲೇಜುಗಳಲ್ಲಿ ಉದ್ಯಮಶೀಲತೆ ಬಗ್ಗೆ ಉಪನ್ಯಾಸ ಕೊಟ್ಟಿದ್ದೇನೆ. ಹೊರ ಬರುವಾಗ ಹಲವರು ಬಂದು ಸ್ವ ವಿವರವನ್ನು ಕೊಟ್ಟು ನಿಮ್ಮ ಕಂಪನಿಯಲ್ಲಿ ಉದ್ಯೋಗ ಸಿಗಬಹುದೇ ಎಂದು ಕೇಳುತ್ತಾರೆ ! ಆದ್ದರಿಂದ ಉದ್ಯಮಿಗಳ ಸಂಖ್ಯೆ ಹೆಚ್ಚಬೇಕಾದರೆ ಮೊದಲು ಮೈ ಚಳಿ ಬಿಡಬೇಕು ಎಂದು ಮುಂದುವರಿಯುತ್ತದೆ ಸುಹಾಸ್ ಮಾತಿನ ಸರಣಿ. ಹಾಗಾದರೆ ಮುಂದಿನ ಕಂಪನಿ ಐಟಿಗೆ ಸಂಬಂಸಿದ್ದೇ ಅಥವಾ ಬೇರೆಯೇ ? ಎಂದಾಗ ಸುಹಾಸ್ ಹೇಳಿದ್ದೇನು ಗೊತ್ತೇ ?
" ಐಟಿ ಈಸ್ ಇನ್ ಮೈ ಬ್ಲಡ್.. ಹೀಗಾಗಿ ಅದು ಬಿಟ್ಟು ಬೇರೆ ಇಲ್ಲ.." !


ಹೀಗಿದ್ದಾನೆ ಯಂಗ್ ಸಿಇಒ !
ಸುಹಾಸ್ ದಿನಚರಿಯೇ ಆತನೊಳಗಿರುವ ಸಾಧಕನನ್ನು ಪರಿಚಯಿಸುತ್ತದೆ. ಪ್ರತಿ ದಿನ ೪ರಿಂದ ೫ ಗಂಟೆ ಮಾತ್ರ ವಿಶ್ರಾಂತಿ. ಉಳಿದೆಲ್ಲ ಪ್ರಚಂಡ ದುಡಿಮೆ. ಹಾಸಿಗೆಗೆ ಒರಗುವ ವೇಳೆ ಮುಂಜಾನೆ ೩ ಅಥವಾ ೪ ಗಂಟೆಯಾಗುತ್ತದೆ. ಬೆಳಗ್ಗೆ ೮ಕ್ಕೆ ಮತ್ತೆ ದಿನ ಆರಂಭ. ಗೆಳೆಯರ ಜತೆಗೆಲ್ಲ ಜಾಲಿ ಹೊಡೆಯಲು ಸಮಯದ ಅಭಾವ. ಕೆಲವೊಮ್ಮೆ ಒತ್ತಡ ಹೆಚ್ಚಾದಾಗ ಇದೆಲ್ಲ ಬೇಕೇ ಎಂದೂ ಅನ್ನಿಸಿದ್ದು ಇದೆಯಂತೆ. ಆದರೆ ತನ್ನ ಕಂಪನಿಯಿಂದ ನೂರಾರು ಮಂದಿಗೆ ಉದ್ಯೋಗ ಸಿಕ್ಕಿರುವುದನ್ನು ನೆನೆದಾಗ ಪಟ್ಟ ಶ್ರಮ ಸಾರ್ಥಕ ಎನ್ನಿಸಿ ಮತ್ತೆ ಚೈತನ್ಯ ಗಳಿಸಿಕೊಳ್ಳುತ್ತೇನೆ.ನಾನು ಆಧ್ಯಾತ್ಮಿಕ ವ್ಯಕ್ತಿಯಲ್ಲ, ಆದರೆ ಆದರೆ ಒತ್ತಡ ಶಮನಕ್ಕೆ ಯೋಗಾಭ್ಯಾಸ ಕಲಿಯಲು ಬಯಸಿದ್ದೇನೆ ಎನ್ನುತ್ತಾನೆ ಸುಹಾಸ್. ಎಂಥಾ ಪ್ರಬುದ್ಧ ಮಾತಲ್ಲವೇ ಇದು. ಬಿಬಿಸಿ ನ್ಯೂಸ್ ಚಾನೆಲ್‌ನವರಂತೂ ಒಂದು ವಾರ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಸುಹಾಸ್ ಉಣ್ಣೋದರಿಂದ ಹಿಡಿದು ಮಲಗೋತನಕ ಶೂಟಿಂಗ್ ಮಾಡಿ ಹೋಗಿದ್ದರು. ಹೆತ್ತವರ ಜತೆ ಕಾಲ ಕಳೆಯಲೂ ಈತನಿಗೆ ಸಮಯ ಸಿಗುತ್ತಿಲ್ಲ. ಅಮೆರಿಕ, ಫ್ರಾನ್ಸ್, ಜರ್ಮನಿ, ಸ್ಪೇನ್, ಸಿಂಗಾಪುರ ಅಂತ ನಾನಾ ರಾಷ್ಟ್ರಗಳಲ್ಲಿ ಸಂಚರಿಸಬೇಕು. ವಿಶ್ವ ಬ್ಯಾಂಕ್ ಅಧ್ಯಕ್ಷರು ಇ-ಮೇಲ್ ಮೂಲಕ ಆಹ್ವಾನಿಸಿದಾಗ ಸುಹಾಸ್ ವಿಮಾನದಲ್ಲಿದ್ದ.

ಸಾಕು ಪ್ರಾಣಿಗಳೆಂದರೆ ಇಷ್ಟ
ಇಷ್ಟೆಲ್ಲ ಕೆಲಸದ ನಡುವೆಯೂ ಬೀದಿ ನಾಯಿಗಳನ್ನು ಸಲಹಲು ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿದ್ದಾನೆ ಸುಹಾಸ್. ಬಾಲ್ಯದಿಂದಲೇ ನಾಯಿ, ಬೆಕ್ಕು ಅಂತ ಸಾಕುಪ್ರಾಣಿಗಳೆಂದರೆ ಸುಹಾಸ್‌ಗೆ ಪಂಚಪ್ರಾಣ. ಕಚೇರಿಯ ಚೇಂಬರಿನಲ್ಲೂ ಮುದ್ದಾದ ನಾಯಿಮರಿಗಳ ಚಿತ್ರಗಳಿವೆ. ಸುಹಾಸ್‌ನ ಕಂಪ್ಯೂಟರ್ ಪರದೆಯಲ್ಲೂ ನಾಯಿ ಮರಿಗಳು ಆಟವಾಡುತ್ತಿರುವ ಚಿತ್ರವೇ ಮಿಂಚುತ್ತಿದೆ.

ಸುದೀಪ್ ಅಭಿಮಾನಿ, ಕನ್ನಡದ ಚಿತ್ರಗಳೇ ಇಷ್ಟ
ಸಮಯ ಸಿಕ್ಕಿದಾಗ ಕನ್ನಡದ ಚಿತ್ರಗಳನ್ನು ಸುಹಾಸ್ ನೋಡುತ್ತಾನೆ. ಸುದೀಪ್ ಚಿತ್ರಗಳ ಅಭಿಮಾನಿ ನಾನು. ಗ್ಲೋಬಲ್ಸ್‌ನಲ್ಲಿ ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಕನ್ನಡಿಗ ಟೆಕ್ಕಿಗಳಿದ್ದಾರೆ. ಕಚೇರಿ ವ್ಯವಹಾರ ಬಿಟ್ಟು ಉಳಿದ ಸಂದರ್ಭ ಕನ್ನಡದಲ್ಲೇ ಮಾತುಕತೆ ನಡೆಯುತ್ತದೆ ಎನ್ನುತ್ತಾನೆ ಸುಹಾಸ್.
e-mail : suhas@globalsinc.com

No comments:

Post a Comment