Wednesday, 11 November 2009

ನ್ಯಾನೊ ನಿನಗೆ ಕಾಣಿಸ್ತೇನೊ..

ಹೊಸದಿಲ್ಲಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿ ಕಳೆದ ವರ್ಷ ಜನವರಿ ಹತ್ತರಂದು ನ್ಯಾನೊ ಕಾರನ್ನು ಮೊಟ್ಟ ಮೊದಲ ಬಾರಿಗೆ ಪ್ರದರ್ಶಿಸಿದಾಗ ದೇಶದ ಜನ ಕಣ್ಣರಳಿಸಿ ನೋಡಿದ್ದರು. ಈ ವರ್ಷ ಮಾರ್ಚ್ ೨೩ರಂದು ವಾಣಿಜ್ಯೋದ್ದೇಶದಿಂದ ಬಿಡುಗಡೆಗೊಳಿಸಿದಾಗಲೂ ಅದೇ ಮಟ್ಟದಲ್ಲಿ ಜನ ಬೆರಗಾಗಿದ್ದರು. ಹೀಗಾಗಿ ಏಪ್ರಿಲ್ ೯ರಿಂದ ೨೫ರ ತನಕ ಕೇವಲ ೧೫ ದಿನಗಳ ಬುಕ್ಕಿಂಗ್ ಅವಯಲ್ಲಿ ೨೦ ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಇದು ಮಾರುತಿ ೮೦೦ಕ್ಕಿಂತ ಅಗ್ಗದ ಕಾರು ಎಂದು ಬಣ್ಣಿಸಲಾಯಿತು. ಇರಬಹುದು. ಆದರೆ ಈಗ ರಾಜ್ಯದಲ್ಲಿ ಎಷ್ಟು ನ್ಯಾನೊ ಕಾರು ರಸ್ತೆಗಿಳಿದಿವೆ ? ಬೆಂಗಳೂರಿನಲ್ಲಿ ಎಲ್ಲೋ, ಅಲ್ಲೊಂದು ಇಲ್ಲೊಂದು ಕಾರು ಓಡಾಡುತ್ತಿದೆಯಷ್ಟೇ. ಹಾಗಾದರೆ ಎಲ್ಲೆಲ್ಲಿಯೂ ಕಾರು ಬರೋದು ಯಾವಾಗ ?
ಟಾಟಾದ ಮುಂಬಯಿನ ಪ್ರಧಾನ ಕಚೇರಿಯಲ್ಲೂ ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಮುಖ್ಯವಾಗಿ ಕಾನ್‌ಕಾರ್ಡ್ ಮೋಟಾರ್ಸ್ ಹಾಗೂ ಪ್ರೇರಣಾ ಮೋಟಾರ್ಸ್ ಡೀಲರ್‌ಗಳಾಗಿವೆ. ಕಾನ್‌ಕಾರ್ಡ್‌ನ ಶಾಖೆಯೊಂದರಲ್ಲಿ ಸುಮಾರು ೩ ಸಾವಿರ ಮಂದಿಗೆ ಕಾರು ಮಂಜೂರಾಗಿದೆ. ಆದರೆ ೧೦೦ರಿಂದ ೧೫೦ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ. ಪ್ರೇರಣಾ ಮೋಟಾರ್ಸ್‌ನಿಂದ ೨೪ ಕಾರುಗಳನ್ನು ನೀಡಲಾಗಿದೆ.
ಇದಕ್ಕಿಂತ ಹೆಚ್ಚಿನ ಉತ್ತರ ಸಿಗುವುದಿಲ್ಲ. ಡೀಲರ್‌ಗಳಿಗೆ ಸಂಪರ್ಕಿಸಿದರೆ ಟಾಟಾ ಮೋಟಾರ್ಸ್‌ನವರತ್ತ ಬೊಟ್ಟು ಮಾಡುತ್ತಾರೆ. ಟಾಟಾ ಮೋಟಾರ್ಸ್‌ನ ಪ್ರಧಾನ ಕಚೇರಿಯನ್ನು ಸಂಪರ್ಕಿಸಿದರೆ ಮತ್ತೆ ಬೆಂಗಳೂರಿನ ಡೀಲರ್‌ಗಳ ಸಂಪರ್ಕ ಸಂಖ್ಯೆ ಕೊಟ್ಟು ಬಿಡುತ್ತಾರೆ. ಅಷ್ಟೇ.
ಕೊನೆಗೂ ಪ್ರೇರಣಾ ಮೋಟರ್ಸ್‌ನ ಸಿಬ್ಬಂದಿ ಹೇಳಿದ್ದಿಷ್ಟು : ‘ ನ್ಯಾನೊ ಕಾರಿನ ವ್ಯಾಪಾರ ಚಟುವಟಿಕೆ ಸದ್ಯಕ್ಕೆ ನಿಂತಿದೆ. ಯಾಕೆಂದರೆ ಬುಕ್ಕಿಂಗ್ ನಡೆಯುತ್ತಿಲ್ಲ. ಈಗಾಗಲೇ ಕಾರು ಮಂಜೂರಾದವರಿಗೆ, ಸಕಾಲದಲ್ಲಿ ಬಿಡುಗಡೆಯಾಗಬಹುದು. ಬಹುಶಃ ಮುಂದಿನ ತಿಂಗಳು ನೂರೋ, ಇನ್ನೂರೋ ಕಾರು ಬಿಡುಗಡೆಯಾಗಬಹುದು. ಆದರೆ ಪ್ರತಿಯೊಬ್ಬ ಗ್ರಾಹಕನಿಗೂ ಮುಂಬಯಿನಿಂದ ರವಾನೆಯಾಗುವ ಮಂಜೂರು ಪತ್ರದಲ್ಲಿ, ಯಾವಾಗ ಸಿಗುತ್ತದೆ ? ಬಣ್ಣ, ದರ ಇತ್ಯಾದಿ ಎಲ್ಲ ವಿವರ ಇರುತ್ತದೆ ಉದಾಹರಣೆಗೆ ‘ ಅಕ್ಟೋಬರ್‌ನಿಂದ ಡಿಸೆಂಬರ್ ಅವಯಲ್ಲಿ ಬಿಡುಗಡೆ ’ ಆಗಬಹುದು ಎಂದಿರುತ್ತದೆ. ಹೀಗಾಗಿ ಗೊಂದಲದ ಅಗತ್ಯ ಇಲ್ಲ. ಪ್ರೇರಣಾ ಮೋಟಾರ್ಸ್‌ನಿಂದ ನ್ಯಾನೊ ಕಾರು ತೆಗೆದುಕೊಂಡಿರುವ ಗ್ರಾಹಕರು ಸಂತೃಪ್ತಿಯಲ್ಲಿದ್ದಾರೆ. ಅವರು ಹೋದೆಡೆಯಲ್ಲೆಲ್ಲ ಜನ ಪ್ರಶ್ನೆಗಳ ಸುರಿಮಳೆಗೆರೆಯುತ್ತಾರೆ. ಹೊಸ ಉತ್ಪನ್ನವಾದ್ದರಿಂದ ಇದೆಲ್ಲ ಸಹಜ ’
ಇಷ್ಟೆಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಟಾಟಾ ನ್ಯಾನೊ ಕಾರಿನ ಮಾರಾಟದ ಬಗ್ಗೆ ಡೀಲರ್‌ಗಳು ಹಾಗೂ ಟಾಟಾ ಮೋಟಾರ್ಸ್ ಕಂಪನಿ ಮಾಹಿತಿ ಕೊಡಲು ಮಾತ್ರ ಹಿಂದೇಟು ಹಾಕುತ್ತಿರುವುದೇಕೆ ? ಗೊಂದಲ ಮತ್ತು ಅನುಮಾನ ಉಂಟಾಗುವುದೇ ಹೀಗೆ. ಆದರೆ ಒಂದಂತೂ ಸ್ಪಷ್ಟ. ಅತಿ ರಂಜಿತವಾಗಿ ‘ ವಿಶ್ವದ ಅತ್ಯಂತ ಅಗ್ಗದ ಕಾರು ’ ಬುಕ್ಕಿಂಗ್ ಆದದ್ದಕ್ಕೂ, ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಕಾರುಗಳ ಸಂಖ್ಯೆಗೂ ಭಾರಿ ಅಂತರ ಇದೆ. ಆದ್ದರಿಂದಲೇ ಜನ ಕೆಲವೇ ಮಂದಿ ನ್ಯಾನೊ ಮಾಲೀಕರ ಮೇಲೆ ಪ್ರಶ್ನೆಗಳ ಸುರಿಮಳೆಗೆರೆಯುತ್ತಾರೆ. ಈ ನಡುವೆ ಬೆಂಗಳೂರಿನ ಬಳಸಿದ ಕಾರುಗಳ ಮಾರುಕಟ್ಟೆಗೂ ಶೀಘ್ರದಲ್ಲೇ ನ್ಯಾನೊ ಕಾರು ಬರಲಿದೆ ಎಂಬ ಸುದ್ದಿಯಿದೆ. ಈಗಾಗಲೇ ಮುಂಬಯಿನ ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಗೆ ನ್ಯಾನೊ ಬಂದಿದೆ.

No comments:

Post a Comment