Sunday, 29 November 2009

ಚಂದ್ರಮುಖಿ ಇಸ್ರೊ

( ಚಂದ್ರಯಾನದ ಬಗ್ಗೆ ವಿಜಯ ಕರ್ನಾಟಕದಲ್ಲಿ ೨೦೦೮, ಮಾರ್ಚ್ ೨೪ಕ್ಕೆ ಬರೆದ ಲೇಖನ, ಅವಲೋಕನ ವಿಭಾಗದಲ್ಲಿ ಒಂದು ಪುಟ ಭರ್ತಿ ಪ್ರಕಟವಾಗಿತ್ತು. ನುಡಿಚೈತ್ರದಲ್ಲಿ ೨ ಕಂತುಗಳಲ್ಲಿ ಈ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ )

ಚಂದಿರನೇತಕೆ ಕಾಡುವ ನಮ್ಮ..
ಆರಂಭದಿಂದಲೇ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಮುಖ ಗುರಿಗಳಲ್ಲಿ ಬಾಹ್ಯಾಕಾಶ ಸಂಶೋಧನೆ ಸಹ ಒಂದಾಗಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ.
ಎಲೆಕ್ಟ್ರೋಜೆಟ್ ಅಧ್ಯಯನಕ್ಕೆ ತಿರುವನಂತಪುರದಲ್ಲಿ ೧೯೬೩ರಲ್ಲಿ ಸ್ಥಾಪನೆಯಾದ ತುಂಬಾ ರಾಕೆಟ್ ಉಡಾವಣಾ ಕೇಂದ್ರ ದೇಶದ ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು. ಎಕ್ಸ್-ರೇ, ಖಗೋಳ ಶಾಸ್ತ್ರ, ಸೋಲಾರ್ ನ್ಯೂಟ್ರಾನ್, ಸೂಪರ್ ಥರ್ಮಲ್ ಎಲೆಕ್ಟ್ರಾನ್ ಸಾಂದ್ರತೆ ಮತ್ತು ಇತರ ವಿಷಯಗಳ ಬಗ್ಗೆ ಪ್ರಯೋಗ ನಡೆಸಲು ೧೯೭೫ರಲ್ಲಿ ಉಡಾಯಿಸಿದ ಮೊದಲ ಉಪಗ್ರಹ ಆರ್ಯಭಟ, ನಂತರ ಬಿಟ್ಟ ಹೀಲಿಯಂ ತುಂಬಿದ ಬಲೂನುಗಳು, ಸಂಶೋಧನೆಗೆ ಮೀಸಲಾದ ಸೌಂಡಿಗ್ ರಾಕೆಟ್ ಹಾಗೂ ಉಪಗ್ರಹಗಳು ಶೋಧಕ್ಕೆ ನೆರವಾಗಿವೆ. ಜತೆಗೆ ಅನೇಕ ವಿಶ್ವ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಗಳ
ವಿಜ್ಞಾನಿಗಳು ಸೌರವ್ಯೂಹದ ಅಧ್ಯಯನ ಮಾಡಿದ್ದಾರೆ.
ನೈಸರ್ಗಿಕ ಸಂಪನ್ಮೂಲದ ಸಮೀಕ್ಷೆ ಮತ್ತು ನಿರ್ವಹಣೆ, ಹವಾಮಾನ ಸೇವೆ, ಉಪಗ್ರಹ ಸಂಪರ್ಕ ಕುರಿತು ಬಾಹ್ಯಾಕಾಶ ಸಾಧನಗಳ ನಿರ್ಮಾಣದಲ್ಲಿ ಭಾರತ ಕಾಲಕ್ರಮೇಣ ನೈಪುಣ್ಯ ಪಡೆಯಿತು.
ಇಸ್ರೊ ಸಿದ್ಧಪಡಿಸಿರುವ ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ) ಮತ್ತು ಜಿಎಸ್‌ಎಲ್‌ವಿನಿಂದ (ಜಿಯೊ-ಸ್ಟೇಷನರಿ ಲಾಂಚ್ ವೆಹಿಕಲ್) ಚಂದ್ರ ಹಾಗೂ ಸಮೀಪದ ಇತರ ಗ್ರಹಗಳ ಬಗ್ಗೆ ಅಧ್ಯಯನ ನಡೆಸುವ ಭಾರತದ ಸಾಮರ್ಥ್ಯ ಅನೂಹ್ಯ ಮಟ್ಟದಲ್ಲಿ ವೃದ್ಧಿಸಿತು.
ಹೀಗೆ ದೇಶ ಗಳಿಸಿಕೊಂಡಿರುವ ತಾಂತ್ರಿಕ ಸಾಮರ್ಥ್ಯ ಹಾಗೂ ವಿeನಿಗಳ ಕುತೂಹಲ ಇದೀಗ ಚಂದ್ರಯಾನಕ್ಕೆ ಇಸ್ರೊವನ್ನು ಪ್ರೇರೇಪಿಸಿದೆ. ಬಾಹ್ಯಾಕಾಶ ವಲಯದಲ್ಲಿ ದೇಶದ ಯುವ ವಿeನಿಗಳಿಗೆ ಅವಕಾಶಗಳ ಹೆಬ್ಬಾಗಿಲನ್ನು ತೆರೆಯುವುದು ಯೋಜನೆಯ ಮತ್ತೊಂದು ಧ್ಯೇಯ.

ವಿಜ್ಞಾನ ಅಕಾಡೆಮಿಯಲ್ಲಿ ೧೯೯೯ರಲ್ಲಿ ನಡೆದ ಸಭೆಯಲ್ಲಿ ಚಂದ್ರಯಾನದ ಕಲ್ಪನೆ ಅಂಕುರವಾಯಿತು. ಅಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಲ್ಲಿ ಮುಂದಿನ ವರ್ಷ ಮತ್ತೆ ಚರ್ಚೆಯಾಯಿತು. ಈ ಎರಡೂ ಸಂಘಟನೆಗಳ ಸದಸ್ಯರ ಶಿಫಾರಸಿನ ಮೇರೆಗೆ ಇಸ್ರೊ, ರಾಷ್ಟ್ರೀಯ ಚಂದ್ರಯಾನ ಕಾರ್ಯಪಡೆ ರಚಿಸಿತು. ದೇಶದ ಪ್ರಮುಖ ವಿಜ್ಞಾನಿಗಳು, ತಂತ್ರಜ್ಞರು ಯೋಜನೆಯ ರೂಪು ರೇಷೆ ಸಿದ್ಧಪಡಿಸಿದರು. ೨೦೦೩ರಲ್ಲಿ ಕಾರ್ಯಪಡೆಯ ಅಧ್ಯಯನ ವರದಿ ಭಾರತ ಚಂದ್ರಯಾನ ಕೈಗೊಳ್ಳಲೇಬೇಕು ಎಂದು ಶಿಫಾರಸು ಮಾಡಿತು. ೨೦೦೩ರ ನವೆಂಬರ್‌ನಲ್ಲಿ ಮೊದಲ ಚಂದ್ರಯಾನಕ್ಕೆ ಸರಕಾರದ ಒಪ್ಪಿಗೆ ಪಡೆಯಿತು.
" ಚಂದ್ರನಿಗೂ ಸೌರವ್ಯೂಹದ ಆದಿಗೂ ನಂಟಿದೆ. ಅದನ್ನು ಅರ್ಥ ಮಾಡಿಕೊಂಡರೆ ಸೌರವ್ಯೂಹದ ರಹಸ್ಯ ಬಯಲಾಗುವುದು ಖಚಿತ. ಶಶಿಯ ಮೇಲೆ ನೇರವಾಗಿ ಸೂಸುವ ಸೂರ್ಯನ ಎಕ್ಸ್-ರೇಗಳ ಅಧ್ಯಯನ ಕೂಡ ಮಾಡಬಹುದು. ಆತನನ್ನೇ ವೇದಿಕೆಯನ್ನಾಗಿಸಿ ಬಾಹ್ಯಾಕಶ ಯೋಜನೆಗಳನ್ನು ಸುಸೂತ್ರವಾಗಿ ನಡೆಸಬಹುದು. ಸಾಧ್ಯವಾದರೆ ಅಲ್ಲಿನ ಅಗಾಧ ಮೊತ್ತದ ಹೀಲಿಯಂ-೩ ಬಳಸಿ ಭವಿಷ್ಯದ ವಿದ್ಯುತ್ ಕೊರತೆ ನೀಗಿಸಬಹುದೇನೊ, ಎಂಬ ವಿಶ್ವಾಸದಲ್ಲಿ ಭಾರತೀಯ ವಿeನಿಗಳು ಹಗಲು ರಾತ್ರಿಗಳನ್ನು ಸುಡುತ್ತಿದ್ದಾರೆ. ಅಮೆರಿಕ ಮತ್ತಿತರ ರಾಷ್ಟ್ರಗಳೂ ಕೈ ಜೋಡಿಸಿವೆ. ಬಾಹ್ಯಾಕಾಶದಲ್ಲಿ ದೇಶದ ಮೊದಲ ಸಂಪೂರ್ಣ ವೈeನಿಕ ಯೋಜನೆಗೆ ನಮ್ಮಲ್ಲೇಕೆ ಅಪಸ್ವರ ? ಕಾರಣ ನಿಲ್ಲದ ಬಡತನ, ಅಜ್ಞಾನ ಮತ್ತು ರಾಜಕೀಯ.
೪೦೦ ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಸೌರಮಂಡಲದಲ್ಲಿ ಭೂಮಿಗೆ ಪಕ್ಕದ ಮನೆಯವನೇ ಚಂದ್ರ. ೧೯೫೯ರಿಂದ ನೂರಾರು ಸಲ ಚಂದ್ರನನ್ನು ದಕ್ಕಿಸಲು ಶೋಧ ನಡೆದಿದೆ. ಹೀಗಿದ್ದರೂ ಅವನ ಉಗಮ, ಸ್ವರೂಪ, ಆಂತರಿಕ ವಿನ್ಯಾಸ, ರಾಸಾಯನಿಕ ಮತ್ತು ಖನಿಜಗಳ ರಚನೆ ಬಗ್ಗೆ ಸಂಶೋಧನೆ ಮುಗಿದಿಲ್ಲ.ಅಂತಹ ಚಂದಿರನ ಕಡೆಗೆ ಭಾರತದ ಮೊದಲ ಯೋಜನೆಯೇ ಚಂದ್ರಯಾನ-೧
ಭೂಮಿಯ ಗುಉತ್ವಾಕರ್ಷಣೆ ಮೀರಿ ವ್ಯೋಮದಲ್ಲಿ ಇಸ್ರೊ ನಡೆಸಲಿರುವ ಮೊದಲ ಹುಡುಕಾಟವಿದು. ಚಂದ್ರನ ಮೇಲ್ಮೈನ ಕೂಲಂಕಷ ಅಧ್ಯಯನ, ಅಲ್ಲಿನ ವಿಕಿರಣಗಳು, ಶಕ್ತಿಶಾಲಿ ಎಕ್ಸ್ ರೇ ವಲಯ, ತ್ರೀ-ಡಿ ನಕ್ಷೆ, ಖನಿಜಗಳ ಶೋಧವನ್ನು ಯೋಜನೆ ಒಳಗೊಂಡಿದೆ. ಸಂಪೂರ್ಣ ಸ್ವದೇಶಿ ನಿರ್ಮಿತ ೧೧ ಉಪಕರಣಗಳಿಂದ ಶೋಧ ನಡೆಯಲಿದೆ. ಭಾರತದ ಪೇಲೋಡ್‌ಗಳಲ್ಲದೆ ನಾಸಾ, ಇಎಸ್‌ಎ ಮತ್ತು ಬಲ್ಗೇರಿಯಾದ ೬ ಪೇಲೋಡ್‌ಗಳು ಬಳಕೆಯಾಗಲಿವೆ.
ಜಿ. ಮಾಧವನ್ ನಾಯರ್-ಇಸ್ರೊ ಅಧ್ಯಕ್ಷ

ಪಿಎಸ್ಸೆಲ್ವಿ ಬಿದ್ದಾಗ ಅಂಜಿದ್ದರೆ ?
ಮೂಲೋಪಯೋಗವಿಲ್ಲದ ಮತ್ತು ಪ್ರತಿಷ್ಠೆ ಹೆಚ್ಚಿಸಲಾಗುವುದು ಎಂದು ಹೇಳಲಾಗುವ ಉಪಗ್ರಹಗಳಂತಹ ದುಬಾರಿ ಯೋಜನೆಗಳನ್ನು ಕೈ ಬಿಡಬೇಕು. ನಾನೇನು ವೈಜ್ಞಾನಿಕ ಕೀಳರಿಮೆಯನ್ನು ಪ್ರತಿಪಾದಿಸುತ್ತಿಲ್ಲ. ಆದರೆ ವಿಜ್ಞಾನದ ಬಳಕೆಯು ಭಾರತದ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದಂತೆ, ಸಾಮಾನ್ಯ ಜನರ ಮೂಲ ಅಗತ್ಯಗಳೊಂದಿಗೆ ನೇರ ಸಂಬಂಧ ಹೊಂದಿರಬೇಕಷ್ಟೇ ಎಂದು ನಾನು ಹೇಳುವುದು- ಲೋಕ ನಾಯಕ ಜಯಪ್ರಕಾಶ್ ನಾರಾಯಣ ಹಾಗಂತ ಹೇಳಿದ್ದರು. ತುರ್ತುಪರಿಸ್ಥಿತಿಯ ವೇಳೆ ನಾಲ್ಕು ತಿಂಗಳು ಸೆರೆವಾಸ ಅನುಭವಿಸಿದಾಗ ಬರೆದ ದಿನಚರಿಯಲ್ಲಿ ದೇಶದ ಆರ್ಥಿಕ ಚೌಕಟ್ಟು ಹೇಗಿರಬೇಕೆಂದು ವಿವರಿಸುತ್ತ ಬಾಹ್ಯಾಕಾಶ ಯೋಜನೆಗಳನ್ನು ಜೆಪಿ ಬಲವಾಗಿ ವಿರೋಧಿಸುತ್ತಾರೆ. ಆದರೆ ಅವರ ಮಾತನ್ನು ವಿeನಿಗಳು ಯಾವತ್ತೋ ಸುಳ್ಳು ಮಾಡಿದ್ದಾರೆ.
ಕೇವಲ ೧೫ ವರ್ಷಗಳ ಹಿಂದೆ ಸರಿಯೋಣ. ಶ್ರೀಹರಿಕೋಟದಿಂದ ದೇಶದ ಮೊದಲ ಪಿಎಸ್‌ಎಲ್‌ವಿ (ಉಪಗ್ರಹ ಉಡಾವಣಾ ವಾಹನ) ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿತ್ತು. ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಉಡಾವಣೆಯಾದ ೭೦೦ ಸೆಕೆಂಡ್‌ಗಳಲ್ಲೇ ಪಿಎಸ್‌ಎಲ್‌ವಿ ಬಂಗಾಳ ಕೊಲ್ಲಿಯಲ್ಲಿ ಬಿತ್ತು. ಕೋಟ್ಯಂತರ ರೂಪಾಯಿ ಬಂಗಾಳ ಕೊಲ್ಲಿ ಪಾಲಾಯಿತು ಅಂತ ಜನ ಬಾಯಿ ಬಡಿದುಕೊಂಡರು. ಬಡವರಿಗೆ ತುತ್ತು ಸಿಗದ ದೇಶದಲ್ಲಿ ಉಪಗ್ರಹ ಹಾರಿಸುವುದೇಕೆ ಎಂದು ಉಗಿದರು. ಅದೇ ರೀತಿಯಲ್ಲಿ ೪೫೦ ಕೋಟಿ ರೂ. ವೆಚ್ಚದ ಚಂದ್ರಯಾನ ಬೇಕೇ ಎಂದು ಇವತ್ತು ಚರ್ಚೆಯಾಗುತ್ತಿದೆ. ಟೀಕಿಸುವುದಕ್ಕೆ ಮುನ್ನ ಸ್ವಲ್ಪ ಯೋಚಿಸಬೇಕು.
ಇದುವರೆಗೆ ಪಿಎಸ್‌ಎಲ್‌ವಿ ವಿಫಲವಾಗಿದ್ದು ಒಂದು ಸಲ ಮಾತ್ರ.ಮತ್ತೊಂದು ಸಲ ಭಾಗಶಃ ವಿಫಲವಾಯಿತು. ಒಟ್ಟು ೧೨ ಉಡಾವಣೆಗಳಲ್ಲಿ ೧೦ ಸಲ ಯಶಸ್ಸು ಸಿಕ್ಕಿದೆ. ಇವತ್ತು ಜರ್ಮನಿ, ದಕ್ಷಿಣ ಆಫ್ರಿಕಾ, ಇಂಡೊನೇಷ್ಯಾ, ಬೆಲ್ಜಿಯಂ, ಅರ್ಜೆಂಟೀನಾ ಮುಂತಾದ ದೇಶಗಳ ೪೫ರಿಂದ ೩೫೦ ಕೆಜಿ ತೂಕದ ಉಪಗ್ರಹಗಳನ್ನು ಪಿಎಸ್ಸೆಲ್ವಿ ಉಡಾಯಿಸುತ್ತಿದೆ. ಇತ್ತೀಚೆಗೆ ೪ ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ ಏಕಕಾಲಕ್ಕೆ ಉಡಾಯಿಸಿದೆ.
ಇಂದು ದೂರಸಂಪರ್ಕ, ವೈದ್ಯಕೀಯ, ಶಿಕ್ಷಣ, ಕೃಷಿ ಹವಾಮಾನ ಮುಂತಾದ ನಾನಾ ಕ್ಷೇತ್ರಗಳಲ್ಲಿ ಉಪಗ್ರಹದ ಪಾತ್ರ ಅವಿಭಾಜ್ಯ. ಆವತ್ತು ಬಂಗಾಳ ಕೊಲ್ಲಿಗೆ ಉಪಗ್ರಹ ಬಿದ್ದಾಗ ಟೀಕೆಗೆ ಅಂಜಿ ಹಿಂದೇಟು ಹಾಕಿದ್ದರೆ ವಿeನಿಗಳಿಗೆ ಈ ಎಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೇ ? ಮುಖ್ಯವಾಗಿ ದೂರ ಸಂಪರ್ಕ ವಲಯದಲ್ಲಿ ಇಷ್ಟೊಂದು ಕ್ರಾಂತಿ ಆಗುತ್ತಲೇ ಇರಲಿಲ್ಲ.

No comments:

Post a Comment