
ಸಾಮಾನ್ಯ ಮೇಲ್ಸೇತುವೆಯನ್ನು ಕಟ್ಟಲು ವರ್ಷಗಟ್ಟಲೆ ತಗಲುವ ಉದಾಹರಣೆಗಳು ನಮ್ಮಲ್ಲಿ ಧಾರಾಳ ಸಿಗುತ್ತವೆ. ಬೆಂಗಳೂರು ಮೆಟ್ರೊ ರೈಲಿನ ಕಾಮಗಾರಿ ಮೊದಲ ಹಂತವನ್ನು ಪೂರೈಸಲೂ ಇನ್ನೂ ಐದಾರು ವರ್ಷ ಕಾದು ಸುಸ್ತಾಗಬೇಕು. ಹೀಗಿರುವಾಗ ತಗ್ಗು ದಿಣ್ಣೆಗಳಿಂದ ಕೂಡಿದ ಬರಡು ಭೂಮಿಯಲ್ಲಿ ಪ್ರತಿ ವರ್ಷ ೧.೧ ಲಕ್ಷ ಕಾರುಗಳನ್ನು ಉತ್ಪಾದಿಸುವ ಅತ್ಯಾಧುನಿಕ ಘಟಕವನ್ನು ಸ್ಥಾಪಿಸಲು ಎಷ್ಟು ಸಮಯ ಬೇಕು ?
ಮನಸ್ಸು ಮಾಡಿದರೆ ಕೇವಲ ೧೭ ತಿಂಗಳು ಸಾಕು ಎಂಬುದನ್ನು ನಮಗೆ ಸಾಬೀತುಪಡಿಸಿರುವುದು ಭಾರತೀಯ ಕಂಪನಿಯಲ್ಲ, ಜರ್ಮನಿಯ ವೋಕ್ಸ್ ವ್ಯಾಗನ್ ! ವಾಸ್ತವವಾಗಿ ಯೋಜಿಸಿದ್ದಕ್ಕಿಂತ ಒಂಬತ್ತು ತಿಂಗಳು ಮೊದಲೇ ನಿಗದಿತ ಗುರಿಯನ್ನು ಮುಟ್ಟಿದೆ ಈ ಕಾರು ಕಂಪನಿ. ಹಾಗಾದರೆ ಜರ್ಮನಿಯ ಉದ್ಯಮಿಗಳಿಗೆ ಸಾಧ್ಯವಾಗುವ ಇಂಥ ದಾಖಲೆಯ ನಮ್ಮವರಿಗೇಕೆ ಸಾಧ್ಯವಾಗುತ್ತಿಲ್ಲ ?
ಬೇಕಾದರೆ ನೋಡಿ. ಜರ್ಮನಿಯ ವೋಕ್ಸ್‌ವ್ಯಾಗನ್ ಪುಣೆಯಲ್ಲಿ ಶನಿವಾರ ನೂತನ ಪೊಲೊ ಕಾರಿನ ಉತ್ಪಾದನೆಯನ್ನು ಆರಂಭಿಸಿತು. ಮೂಲಸೌಕರ್ಯಗಳ ನಿಟ್ಟಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ, ಬೋಳು ಗುಡ್ಡ ಹಾಗೂ ಬಟಾ ಬಯಲಿನಂತಿರುವ ಚಕಾನ್‌ನಲ್ಲಿ ಸುಮಾರು ೫೭೫ ಎಕರೆ ವ್ಯಾಪ್ತಿಯಲ್ಲಿ ಭಾರಿ ಘಟಕವನ್ನು ವೋಕ್ಸ್‌ವ್ಯಾಗನ್ ನಿರ್ಮಿಸಿದೆ. ಇಂಥ ನೆಲದಲ್ಲಿ ೩,೫೦೦ ಕೋಟಿ ರೂ.ಗಳನ್ನು ಕಂಪನಿ ಬಂಡವಾಳ ಹೂಡಿದೆ. ಸ್ಕೋಡಾ, ಆಡಿ ಮುಂತಾದ ಕಂಪನಿಯ ಕಾರುಗಳನ್ನೀಗ ಇಲ್ಲಿಯೇ ಉತ್ಪಾದಿಸಲಾಗುತ್ತಿದೆ. ಕೈ ತೊಳೆದು ಮುಟ್ಟಬೇಕೆನ್ನುವ, ಪಳಪಳನೆ ಮಿಂಚುತ್ತಿರುವ ಸ್ವಚ್ಛ, ಸುಸಜ್ಜಿತ, ವ್ಯವಸ್ಥಿತ ಕಾರ್ಖಾನೆಯಿದು.
ವೋಕ್ಸ್ ವ್ಯಾಗನ್‌ಗಿಂತಲೂ ಇದರ ನಾನಾ ಬ್ರಾಂಡ್‌ಗಳ ಕಾರುಗಳ ಹೆಸರು ಭಾರತದಲ್ಲಿ ಜನಪ್ರಿಯ. ಸಿಯೆಟ್, ಸ್ಕೋಡಾ, ಆಡಿ, ಬೆಂಟ್ಲಿ, ಲ್ಯಾಂಬೋರ್‍ಗಿನಿ, ಪೋರ್ಶೆ, ಬುಗಟ್ಟಿ, ಸ್ಕಾನಿಯಾ, ವೋಕ್ಸ್ ವ್ಯಾಗನ್ ಪ್ಯಾಸೆಂಜರ್ ಕಾರು, ವೋಕ್ಸ್ ವ್ಯಾಗನ್ ಕಮರ್ಶಿಯಲ್ ವಾಹನಗಳನ್ನು ಕಂಪನಿ ಉತ್ಪಾದಿಸುತ್ತಿದೆ. ವಿಶ್ವಾದ್ಯಂತ ೬೧ ರಾಷ್ಟ್ರಗಳಲ್ಲಿ ೩.೭ ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಪ್ರತಿ ದಿನ ೨೬,೬೦೦ ವಾಹನಗಳ ಉತ್ಪಾದನೆ ಅಥವಾ ಸಂಬಂಸಿದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ ಎನ್ನುತ್ತದೆ ಕಂಪನಿ.
ಭಾರತೀಯ ಮಾರುಕಟ್ಟೆಗೆ ವೋಕ್ಸ್‌ವ್ಯಾಗನ್‌ನ ಸ್ಕೋಡಾ ಕಾರು ೨೦೦೧ರಲ್ಲಿ ಪ್ರವೆಶಿಸಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ವೋಕ್ಸ್‌ವ್ಯಾಗನ್‌ನ ಆಡಿ, ಪಸ್ಯಾಟ್ , ಜೆಟ್ಟಾ ಸೇರಿದಂತೆ ೮ ಮಾದರಿಯ ಕಾರುಗಳನ್ನು ಅಸೆಂಬಲ್ ಮಾಡುತ್ತಾರೆ. ಕಾರನ್ನು ಪರಿಚಯಿಸುವುದರ ಮೂಲಕ. ಮರು ವರ್ಷವೇ ಜೆಟ್ಟಾ ಕಾರನ್ನು ಬಿಡುಗಡೆಗೊಳಿಸಿತು. ದೇಶದಲ್ಲಿ ತನ್ನ ಕಾರುಗಳು ಜನರ ಮನಸೂರೆಗೊಳ್ಳುತ್ತಿದ್ದಂತೆ ವೋಕ್ಸ್‌ವ್ಯಾಗನ್ ಇಲ್ಲಿಯೇ ಮೊದಲ ಉತ್ಪಾದನೆ ಘಟಕವನ್ನು ಆರಂಭಿಸಲು ತೀರ್ಮಾನಿಸಿತು. ಯಾಕೆಂದರೆ ಜರ್ಮನಿಯಲ್ಲೋ, ಬೇರೆಲ್ಲೊ ಬಿಡಿ ಭಾಗಗಳನ್ನು ಉತ್ಪಾದಿಸಿ ಭಾರತಕ್ಕೆ ತಂದು ಜೋಡಿಸಿ ಮಾರಾಟ ಮಾಡುವುದಕ್ಕಿಂತ ಇಲ್ಲಿಯೇ ಉತ್ಪಾದಿಸಿದರೆ ಖರ್ಚು ಉಳಿತಾಯವಾಗುತ್ತದೆ. ವ್ಯಾಪಾರ ಲಾಭದಾಯಕವಾಗುತ್ತದೆ. ಬೇಕಾದರೆ ರಫ್ತನ್ನೂ ಇಲ್ಲಿಂದಲೇ ಮಾಡಬಹುದು. ಹೀಗಾಗಿ ಸಾಕಷ್ಟು ಹುಡುಕಾಟ, ರಾಜ್ಯ ಸರಕಾರಗಳ ಜತೆ ಮಾತುಕತೆಯ ಕಸರತ್ತಿನ ನಂತರ ಮಹಾರಾಷ್ಟ್ರದ ಪುಣೆಯಲ್ಲಿನ ಚಕಾನ್‌ನ್ನು ವೋಕ್ಸ್ ವ್ಯಾಗನ್ ಆಯ್ಕೆ ಮಾಡಿಕೊಂಡಿತು. ಚಕಾನ್‌ನಲ್ಲಿ ವೋಕ್ಸ್‌ವ್ಯಾಗನ್‌ಗೆ ದಕ್ಕಿದ ಕೈಗಾರಿಕಾ ಪ್ರದೇಶ ವಿಸ್ತಾರವಾಗಿದ್ದರೂ ಬಹುತೇಕ ಬರಡು ನೆಲವಾಗಿತ್ತು.
ಅಂತೂ ೨೦೦೬ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಕಂಪನಿ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕೇವಲ ಮೂವತ್ತು ದಿನಗಳಲ್ಲಿ ನೆಲವನ್ನು ತಟ್ಟುಗೊಳಿಸಿ ಪೈಂಟ್ ಶಾಪ್, ಬಾಡಿ ಶಾಪ್, ಅಸೆಂಬ್ಲಿ ಮತ್ತು ಲಾಜಿಸ್ಟಿಕ್ ವಿಭಾಗವನ್ನು ನಿರ್ಮಿಸಲಾಯಿತು. ೨೦೦೮ರ ಅಕ್ಟೋಬರ್ ಹೊತ್ತಿಗೆ ಘಟಕದ ಎಲ್ಲ ವಿಭಾಗಗಳಿಗೆ ಬೇಕಾದ ಪರಿಕರಗಳನ್ನು ತಂದು ಜೋಡಿಸಲಾಯಿತು. ನವೆಂಬರ್‌ನಲ್ಲಿ ಮೊದಲ ಬಾರಿಗೆ ಬಾಡಿ ಶಾಪ್ ಮತ್ತು ಅಸೆಂಬ್ಲಿ ಕಾರ್ಯಾರಂಭ ಮಾಡಿತು. ಈ ವರ್ಷ ಜನವರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪೇಯಿಂಟ್ ಮಾಡಿದ ಕಾರಿನ ಬಾಡಿಯನ್ನು ಉತ್ಪಾದಿಸಲಾಯಿತು. ಮಾರ್ಚ್‌ನಲ್ಲಿ ಘಟಕವನ್ನು ಮಹಾರಾಷ್ಟ್ರದ ರಾಜ್ಯಪಾಲ ಎಸ್.ಸಿ ಜಮೀರ್ ಉದ್ಘಾಟಿಸಿದರು. ಮೊನ್ನೆ ಡಿ. ೧೨ರಂದು ಮಧ್ಯಮ ಶ್ರೇಣಿಯ ಪೊಲೊ ಕಾರಿನ ಉತ್ಪಾದನೆಯನ್ನು ಆರಂಭಿಸಲಾಯಿತು. ಹೊಸ ವರ್ಷದ ಜನವರಿಯಲ್ಲಿ ಪೊಲೊ ಕಾರು ಭಾರತದ ರಸ್ತೆಗಿಳಿಯಲಿದೆ. ನಿಜ. ಮಹಾರಾಷ್ಟ್ರ ಸರಕಾರ ವೋಕ್ಸ್ ವ್ಯಾಗನ್ ಕಂಪನಿಗೆ ನೆಲ, ನೀರು, ಕರೆಂಟು ಸೇರಿದಂತೆ ಸಕಲ ನೆರವನ್ನೂ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಆದರೆ ಅದೊಂದೇ ಕಂಪನಿಯ ಕಾರುಬಾರಿಗೆ ಸಾಕಾಗುವುದಿಲ್ಲ. ಗುಣಮಟ್ಟ ಕಾಯ್ದುಕೊಳ್ಳುವಿಕೆ, ಸತತ ಪರಿಶ್ರಮ, ಸಂಶೋಧನೆ ಮತ್ತು ತ್ವರಿತ ಅಭಿವೃದ್ಧಿ , ತಂತ್ರಗಾರಿಕೆ ಹಾಗೂ ನಾಯಕತ್ವದ ಪರಿಣಾಮವಾಗಿ ವೋಕ್ಸ್ ವ್ಯಾಗನ್ ಇವತ್ತು ಒಂದಾದ ಮೇಲೊಂದರಂತೆ ಮೈಲುಗಲ್ಲು ಸ್ಥಾಪಿಸುತ್ತಿದೆ.