Sunday 26 July 2009

ಪ್ಲೀಸ್‌..ನೆಗೆಟಿವ್ ಮಾತು ಬೇಡ..


ಬದುಕಿನಲ್ಲಿ ಯಶಸ್ವಿಯಾಗಬೇಕು ಎಂದು ಹೊರಡುವವರ ಮೊದಲ ಶತ್ರುವೇ ನೆಗೆಟಿವ್ ಥಿಂಕಿಂಗ್.
ಯಾವುದೇ ಆಹ್ವಾನ ನೀಡದಿದ್ದರೂ ನೆಗೆಟಿವ್ ಆಲೋಚನೆಗಳು ಸುಲಭವಾಗಿ ಸುರುಳಿ ಬಿಚ್ಚುತ್ತದೆ.ಆದರೆ ಒಳ್ಳೆಯದ್ದನ್ನು ಚಿಂತಿಸಲು ಪ್ರಜ್ಞಾಪೂರ್ವಕವಾದ ಪ್ರಯತ್ನ ಬೇಕಾಗುತ್ತದೆ. ಆದರೆ ಬದುಕನ್ನು ಮುರಿಯಲು ಬೇರಾವುದೂ ಬೇಡ, ನಕಾರಾತ್ಮಕ ಚಿಂತನೆಯೇ ಧಾರಾಳ ಸಾಕು. ಯಾರಿಗೇ ಆಗಲೀ, ನಕಾರಾತ್ಮಕ ಚಿಂತನೆ ಹೆಚ್ಚುತ್ತಿದ್ದಂತೆ ಖಿನ್ನತೆ ಮತ್ತು ಪ್ರತಿಯೊಂದರಲ್ಲಿಯೂ ಜಿಗುಪ್ಸೆ ಕಾಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಏರುಪೇರಾಗುತ್ತದೆ. ಕೆಲವೊಮ್ಮೆ ಆತ್ಮಹತ್ಯೆಯ ಯೋಜನೆ ಕೂಡ ಸುಳಿಯುತ್ತದೆ.
ನಮ್ಮ ಚಿಂತನೆಗಳು ಭಾವನೆಗಳನ್ನು ಸೃಷ್ಟಿಸುತ್ತವೆ. ಭಾವನೆಗಳು ವರ್ತನೆಯನ್ನು ರೂಪಿಸುತ್ತವೆ. ಆದ್ದರಿಂದ ಒಂದಕ್ಕೊಂದು ನಿಕಟ ಸಂಬಂಧವನ್ನು ಇಲ್ಲಿ ಕಾಣಬಹುದು. ಸಕಾರಾತ್ಮಕ ಚಿಂತನೆ ಇರುವಲ್ಲಿ ಭಾವನೆ ಮತ್ತು ವರ್ತನೆ ಕೂಡ ಅದುವೇ ಆಗಿದ್ದು, ಬದುಕಿನಲ್ಲಿ ಸುಧಾರಣೆಯ ತಂಪಿರುತ್ತದೆ. ಅದೇ ನಕಾರಾತ್ಮಕ ಚಿಂತನೆ ಇದ್ದಲ್ಲಿ ಭಾವನೆ ಮತ್ತು ವರ್ತನೆ ಅದನ್ನೇ ಹಿಡಿದು ಹಿಂಬಾಲಿಸುತ್ತದೆ. ಎಲ್ಲೆಲ್ಲೂ ಸೂಲು ಮತ್ತು ನಿರಾಶೆಯ ಕಾರ್ಮೋಡ ಕವಿಯುತ್ತದೆ. ನಿಮಗೆ ಅರಿವಿಲ್ಲದಂತೆ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳುವುದರಲ್ಲಿಯೇ ಆಯುಷ್ಯ ಮುಗಿಯುತ್ತದೆ. ನಿಮ್ಮೂರ ಸಂತೆಯಲ್ಲಿ ಕೂಡ ನೀವು ಒಬ್ಬಂಟಿಯಾಗುತ್ತೀರಿ.
ಮೋಸ, ಆರ್ಥಿಕ ಹಿಂಜರಿತ, ಬರ್ಬರ ಹತ್ಯೆ, ಉಗ್ರರ ದಾಳಿ, ಅತ್ಯಾಚಾರ, ರೈತರ ಆತ್ಮಹತ್ಯೆ, ಕಪ್ಪುಹಣ ಅಂತ ಪತ್ರಿಕೆ, ಟಿವಿಯಲ್ಲಿ ಕಂಡೂ ಕಂಡೂ ಮನಸ್ಸು ಬಸವಳಿದು ಹೋಗಿದೆಯೇ ?ಮನಸ್ಸು ಗೊಂದಲದ ಗೂಡಾಗಿ ಬದುಕು ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಲು ದುಸ್ಸಾಧ್ಯವಾಗುತ್ತಿದೆಯೇ ? ಹಾಗಿದ್ದಲ್ಲಿ ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಹತೋಟಿಗೆ ಯತ್ನಿಸುತ್ತಿವೆ ಎಂದರ್ಥ.
ಮನಸ್ಸು ನಾನಾ ಚಿಂತನೆಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಪರಿಶೀಲಿಸುವ ಅಥವಾ ತೀರ್ಪು ನೀಡುವ ಗೋಜಿಗೆ ಹೋಗುವುದಿಲ್ಲ. ಕೇಳಿದ್ದು, ಕಾಣಿಸಿದ್ದು ಮತ್ತು ಓದಿಕೊಂಡಿದ್ದು ಯಾವಾಗಲೂ ನಕಾರಾತ್ಮಕವಾಗಿದ್ದಲ್ಲಿ ಮನಸ್ಸು ಅದನ್ನೇ ಅವಿವೇಕದಿಂದ ಒಪ್ಪಿಕೊಳ್ಳುತ್ತದೆ. ಎಷ್ಟೋ ಮಂದಿ ಕುಟುಂಬದವರಿಗಿಂತಲೂ ಮಿತ್ರ ಎನ್ನಿಸಿಕೊಂಡವನು ಹೇಳಿದ್ದು ವೇದ ವಾಕ್ಯ ಎಂದು ಭ್ರಮಿಸಿ ವ್ಯವಹಾರಗಳಲ್ಲಿ ಕೈ ಸುಟ್ಟುಕೊಳ್ಳುವುದು ಇದೇ ಕಾರಣಕ್ಕೆ. ಮನಬಂದಂತೆ ನಡೆದುಕೊಳ್ಳಬಾರದು ಅಂತ ಹೇಳುವುದು ಸಮ್ಮನೆಯಲ್ಲ.
ಇಷ್ಟಿದ್ದರೂ ಸಂತಸದಾಯಕ ಸಂಗತಿ ಏನೆಂದರೆ ಮನಸ್ಸು ಯೋಚಿಸುವ ಧಾಟಿಯನ್ನು ಬದಲಿಸಬಹುದು. ಸಕಾರಾತ್ಮಕ ಮನಸ್ಸು ಮತ್ತು ಚೈತನ್ಯ ತಂದುಕೊಳ್ಳಲು ಸತತ ಪ್ರಯತ್ನ , ಶ್ರಮ ಮತ್ತು ಸಮಯ ಸಾಕು. ಪದೇಪದೆ ನೆಗೆಟಿವ್ ಯೋಚನೆ ಸುಳಿಯುತ್ತಿದ್ದಲ್ಲಿ, ಅದರ ಬದಲಿಗೆ ಪ್ರಬಲ ಪಾಸಿಟಿವ್ ಚಿಂತನೆ ರೂಢಿಸಿಕೊಳ್ಳಿ. ಸದಾ ಸೋಲು ಕಣ್ಣಿಗೆ ಕಟ್ಟುತ್ತಿದ್ದರೆ ಗೆಲುವನ್ನು ಚಿತ್ರಿಸಿ. ಸದಾ ನನ್ನಿಂದಾಗದು ಎನ್ನುವುದರ ಬದಲಿಗೆ ಆಗುತ್ತೆ ಎಂದು ಮಂದುವರಿಯಿರಿ. ಬೇಕಾದರೆ ಒಮ್ಮೆ ಪ್ರಯೋಗಿಸಿ ನೋಡಿ.
ಸಕಾರಾತ್ಮಕ ಚಿಂತನೆ ಕೂಡ ಮನಸ್ಸಿನಾಳದಲ್ಲಿ ಇದ್ದೇ ಇರುತ್ತದೆ. ಅವುಗಳನ್ನು ಉದ್ದೀಪನಗೊಳಿಸಬೇಕಷ್ಟೇ. ಕೊನೆಯದಾಗಿ ಮಾತನಾಡುವಾಗಿ ನೆಗೆಟಿವ್..ನೆಗೆಟಿವ್‌ ಪದಗಳನ್ನು ಬಳಸಬೇಡಿ.

2 comments:

  1. ಸ್ವಾಗತಗಳು.... ಬ್ಲಾಗಿಂಗ್ ಪ್ರಪಂಚಕ್ಕೆ... ಉತ್ತಮ ಸೌಂದರ್ಯದ ಲೇಖನಗಳು ಹೊರಬರುತ್ತಿವೆ. ಈ ಪ್ರೀತಿ, ಈ ರೀತಿ ಹೀಗೇ... ಉಳಿಯಲಿ....

    ReplyDelete
  2. ಗೆಳೆಯಾ, ನಿಮ್ಮ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು. ನಿಮ್ಮ ಬೆಂಬಲ, ವಿಮರ್ಶೆಗೆ ಸದಾ ಸ್ವಾಗತ

    ReplyDelete