Sunday 9 August 2009

ರಾಮನಗರದ ಬಳಿ ಕಂಡ ಮರೆಯಲಾಗದ ಚಿತ್ರ...

ಚನ್ನಪಟ್ಟಣದ ಅರಳಾಳುಸಂದ್ರ ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ್ದೆ. ಗೆಳೆಯ ಗಿರೀಶ ಅವರ ಸಾವಯವ ಕೃಷಿಯನ್ನು ಕಂಡು, ಅವರ ಮನೆಯಲ್ಲಿ ಉಂಡು ರಾಮನಗರಕ್ಕೆ ಹೊರಟಿದ್ದೆ. ಇದಕ್ಕೂ ಮುನ್ನ ಒಂದು ಸಣ್ಣ ಪ್ರಸಂಗ ನಡೆಯಿತು. ಗಿರೀಶ ಅವರ ಅಮ್ಮ ಮನೆಗೆ ಬಂದ ಅತಿಥಿಗೆ ಅಂತ ಮೊಟ್ಟೆ, ಕೋಳಿಸಾರು, ಮುದ್ದೆ ಮಾಡಿ ನಮಗಾಗಿ ಕಾಯುತ್ತಿದ್ದರು. ತೋಟವನ್ನೆಲ್ಲ ಸುತ್ತಾಡಿ ಬಳಲಿ ಮನೆಗೆ ಬಂದೊಡನೆ ತಟ್ಟೆಗೆ ಬಡಿಸಿ ತಂದರು. ತಟ್ಟೆಯನ್ನು ಕಂಡೊಡನೆ ನನ್ನ ತಪ್ಪಿನ ಅರಿವಾಯಿತು. ನನಗೆ ಮಾಂಸಾಹಾರ ಸೇವನೆ ಅಭ್ಯಾಸವಿಲ್ಲ ಎಂದು ಮೊದಲೇ ತಿಳಿಸಲು ಮರೆತುಬಿಟ್ಟಿದ್ದೆ. ಪಾಪ, ಆ ತಾಯಿ ತುಂಬ ನಿರಾಶರಾದರು. ಮೊದಲೇ ಹೇಳಬಾರದಿತ್ತೇ, ಹೇಳಿದ್ದರೆ ಬೇರೆಯೇ ಅಡುಗೆ ಮಾಡಿರುತ್ತಿದ್ದೆ, ಮಜ್ಜಿಗೆಯೂ ಇಲ್ಲ ಮನೇಲಿ ಎಂದರು. ಇಲ್ಲಮ್ಮಾ, ನೀವೇನೂ ಯೋಚನೆ ಮಾಡಬೇಡಿ, ನನಗೂ ಹೇಳಲು ಮರೆತು ಹೋಯಿತು. ಪರ‍್ವಾಗಿಲ್ಲ, ಅನ್ನ ಸಾರು ನನಗೆ ಸಾಕು ಎಂದೆ. ಅವರು ಹಾಗೆಯೇ ಮಾಡಿದರು. ಊಟ ಮಾಡುತ್ತಿದ್ದಂತೆ ಪಕ್ಕದ ಮನೆಯಿಂದ ಮಜ್ಜಿಗೆ ತಂದು ಕೊಟ್ಟರು. ಅದನ್ನೂ ಕುಡಿದೆ. ಅವರ ವಾತ್ಸಲ್ಯಮಯಿ ಉಪಚಾರ ನನಗೆ ನನ್ನ ಹಳ್ಳಿಯನ್ನು ನೆನಪಿಗೆ ತಂದಿತು. ಊಟವಾಗುತ್ತಿದ್ದಂತೆ ರೈತಸಂಘದ ಪುಟ್ಟಸ್ವಾಮಿ ಬಂದರು. ಅವರೊಡನೆ ಗಂಟೆಗಟ್ಟಲೆ ಹರಟೆ ಹೊಡೆದೆ. ಗ್ರಾಮ ಜೀವನ, ಬೆಂಗಳೂರಿನ ಪ್ರಭಾವ, ಪಟ್ಟಣ ಸೇರಿ ಕೆಡುವ ಹಳ್ಳಿ ಹೈದರ ಬಗ್ಗೆ ಮಾತನಾಡಿದೆವು. ಸಾವಯವ ಕೂಡ ಚರ್ಚೆಗೆ ಬಂತು.
ಅಷ್ಟು ಹೊತ್ತಿಗೆ ಸಾಯಂಕಾಲವಾಗಿತ್ತು. ಸ್ವಾದಿಷ್ಟವಾದ ಟೀ ಕುಡಿದು ಗಿರೀಶ್ ಮುಂತಾದವರಿಗೆ ಧನ್ಯವಾದ ತಿಳಿಸಿ, ನನ್ನ ಸ್ಕೂಟರನ್ನೇರಿ ರಾಮನಾಗರದ ಹಾದಿಯಲ್ಲಿ ಹೋದೆ. ದಾರಿ ಮಧ್ಯೆ ಮೋಡ ಕವಿದು ಸಮಾ ಮಳೆ ಬಂತು. ಯಾವುದೋ ಹಳ್ಳಿಯ ಬೀದಿ ಪಕ್ಕದ, ಹಂಚಿನ ಮಾಡಿನ ಕಟ್ಟಡದ ಬಳಿ ಸ್ಕೂಟರ‍್ ನಿಲ್ಲಿಸಿದೆ. ಅದೊಂದು ಸಾರ್ವಜನಿಕ ಕಟ್ಟಡ. ಹಳೆಯದಾಗಿತ್ತು. ಬಾಗಿಲು ಮುಚ್ಚಿದ ಗ್ರಾಮೀಣ ಗ್ರಂಥಾಲಯ ಕೊಠಡಿ, ಪುಟ್ಟ ಗುಡಿ, ಹಾಲಿನ ಸೊಸೈಟಿ ಅಲ್ಲಿತ್ತು. ಹುಡುಗನೊಬ್ಬ , ಲ್ಯಾಕ್ಟೋಮೀಟರನ್ನು ಹಾಲಿನಲ್ಲಿ ಮುಳುಗಿಸಿ ಪರೀಕ್ಷಿಸುತ್ತಿದ್ದ. ಇತ್ತೀಚಿನ ಕೆಎಂಎಫ್‌ ಚುನಾವಣೆಯಲ್ಲಿ ಯಾರ‍್ಯಾರಿಗೋ ಏನೇನೋ ಕೊಟ್ಟಿದ್ದರು. ಎಲ್ಲರೂ ಬಾಚಿದ್ದೇ ಬಾಚಿದ್ದು. ನಮಗೆ ಮಾತ್ರ ಐದು ಪೈಸಾ ಸಿಗಲಿಲ್ಲ ಎಂದು ಹಲ್ಲು ಕಿರಿಯುತ್ತಾ ಸಂಗಡಿಗರೊಡನೆ ಹರಟುತ್ತಿದ್ದ. ಮಿಕ್ಕವರೂ ಕಿಸಕಿಸನೆ ನಗುತ್ತಿದ್ದರು. ಮಳೆ ಬಿರುಸಾದೊಡನೆ ಬಡ ಮಹಿಳೆಯೊಬ್ಬಳು ತಳ್ಳುವ ಗಾಡಿಯನ್ನು ತಳ್ಳುತ್ತಾ ಮಾಡಿನ ಸಮೀಪ ನಿಲ್ಲಿಸಿದಳು. ಗಾಡಿಯಲ್ಲಿ ಮಕ್ಕಳ ಆಟದ ಸಾಮಾನುಗಳು, ಬಿಂದಿಗೆ, ಪ್ಲಾಸ್ಟಿಕ್ ಪದಾರ್ಥಗಳು ಇದ್ದವು. ಪ್ಲಾಸ್ಟಿಕ್ ನ ಹಾಳೆಯನ್ನು ವಸ್ತುಗಳ ಮೇಲೆ ಅವಸರದಲ್ಲಿ ಮುಚ್ಚಿದ ಮಹಿಳೆ ತನ್ನ ಹಸುಗೂಸನ್ನು ಅವುಚಿಕೊಂಡು ಗಾಡಿಯ ಚಕ್ರದ ನಡುವೆ ಕುಕ್ಕರಗಾಲಿನಲ್ಲಿ ಕುಂತಳು. ಆಗ ಹತ್ತಿರವಿದ್ದವರು, ಬಾರಮ್ಮಾ, ಮಳೆ ಜೋರಿದೆ. ಇಲ್ಲಿ ನಿಲ್ಲು ಎಂದರು. ಕಟ್ಟಡದ ಜಗುಲಿಗೆ ಬಂದು ಯಾವಾಗ ಮಳೆ ನಿಲ್ಲುತ್ತದೆಯೋ ಅಂತ ಆಕಾಶ ನೋಡುತ್ತ ನಿಂತಳು. ಗಾಳಿ ಜೋರಾಗಿ ಬೀಸಿದಾಗ ಪ್ಲಾಸ್ಟಿಕ್ ಹಾಳೆ ಜಾರಿ ಆಟದ ಸಾಮಾನುಗಳು ತೊಯ್ದು ತೊಪ್ಪೆಯಾಯಿತು. ಮಗುವನ್ನು ಜಗುಲಿಯಲ್ಲಿಟ್ಟ ಮಹಿಳೆ, ಲಗುಬಗೆಯಿಂದ ಮತ್ತೆ ಪ್ಲಾಸ್ಟಿಕ್ ಹಾಳೆಯನ್ನು ಸರಿಪಡಿಸಿ, ತಾನೂ ಒದ್ದೆಯಾದಳು. ಮಗು ಚಳಿಯಲ್ಲಿ ನಡುಗುತ್ತಿತ್ತು.
ಮಳೆ ಸ್ವಲ್ಪ ಕಮ್ಮಿಯಾಗುತ್ತಿದ್ದಂತೆ ಮೆಟ್ಟಿಲನ್ನು ಇಳಿದು ಗಾಡಿಯ ನಡುವೆ ಮಗುವನ್ನು ಇಟ್ಟ ಮಹಿಳೆ, ತುಂತುರು ಮಳೆಗೆ ಲೆಕ್ಕಿಸದೆ ಗಾಡಿಯನ್ನು ತಳ್ಳುತ್ತಾ ಹೋದಳು. ಮುಂದೆ ಇಳಿಜಾರಿನಲ್ಲಿ ಹಿಂಬದಿಯಿಂದ ಗಾಡಿಯನ್ನು ಗಟ್ಟಿಯಾಗಿ ಹಿಡಿಯುತ್ತ ಬೇಗ ಬೇಗನೆ ಸಾಗಿ ತಿರುವಿನಲ್ಲಿ ಮರೆಯಾದಳು. ಆಕೆಯ ಚಿತ್ರ ಸಣ್ಣದಾಗುತ್ತಿದ್ದಂತೆ ನೋಡುತ್ತಿದ್ದ ಹಳ್ಳಿಗರು, ನೋಡ್ರಲಾ, ಆಯಮ್ಮ ಜೀವನಕ್ಕೆ ಎಷ್ಟು ಕಷ್ಟ ಪಡ್ತಿದಾಳೆ, ನೋಡಿ ಕಲೀರಿ..ಅಂತ ಆಸುಪಾಸಿನ ಮಿತ್ರರಿಗೆ ಹೇಳಿದರು.
ಬೆಂಗಳೂರಿಗೆ ಬಂದ ನಂತರವೂ ತಳ್ಳುವ ಗಾಡಿಯಲ್ಲಿ ಹಸುಗೂಸನ್ನು ಇಟ್ಟು ಮಳೆಯಲ್ಲಿಯೇ ನೆನೆಯುತ್ತ ಸಾಗಿದ ಮಹಿಳೆಯ ಸಂಕಟ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಈಗಲೂ ಆ ಚಿತ್ರ ಮರೆಯಲಾಗುತ್ತಿಲ್ಲ...
ಕಾಫಿಯ ಬಗ್ಗೆ : ನಾಗೇಶ ಹೆಗಡೆಯವರ ಮನೆಯ ನಾಯಿಯ ಹೆಸರು ಕಾಫಿ, ಮುದ್ದಾದ, ಬುದ್ಧಿವಂತ ಶ್ವಾನವದು. ಹೆಗಡೆಯವರ ಮೈತ್ರಿಗ್ರಾಮದ ಮನೆಗೆ ಶನಿವಾರ ಹೋಗಿದ್ದಾಗ ಮೊದಲು ಅದನ್ನೇ ಪರಿಚಯ ಮಾಡಿಕೊಟ್ಟರು. ಮೊದಲು ಸಹಜವಾಗಿ ಬೊಗಳಿದ್ದ ಕಾಫಿ, ಕೆಲವು ಕ್ಷಣಗಳ ಕಾಲ ನನ್ನನ್ನೇ ದಿಟ್ಟಿಸುತ್ತಿತ್ತು. ನಂತರ ಪರಿಚಯವಾದವರಂತೆ ಸುಮ್ಮನಿತ್ತು. ಹೆಗಡೆಯವರ ಜತೆ ಸಾಯಂಕಾಲ ಸ್ವಲ್ಪ ಅಡ್ಡಾಡಲು ಹೊರಟಾಗ ಕಾಫಿಯೂ ನಮ್ಮೊಡನೆ ಹೊರಟಿತು. ಹೊಂಡಾ ಆಕ್ಟಿವಾದಲ್ಲಿ ನಾವಿಬ್ಬರು ಹೋಗುತ್ತಿದ್ದರೆ, ಪಕ್ಕದಲ್ಲಿ ಕಾಫಿಯ ರನ್ನಿಂಗ್..ಕೆಲವು ಸಲ ಕೊಳ್ಳದಂಥ ಮಾರ್ಗದಲ್ಲಿ ಕಾಫಿಯೇ ನಮ್ಮ ಗಾಡಿಯನ್ನು ಹಿಂದೆ ಹಾಕುತ್ತಿತ್ತು. ಅದರ ರೇಸನ್ನು ಕಂಡು ನಗು ಉಕ್ಕುತ್ತಿತ್ತು. ಆದರೆ ಕಾಫಿಯ ಗುಣ ಚೆನ್ನಾಗಿದೆ ಅನ್ನಿಸಿತು. ವಾಪಸ್‌ ಬರುವಾಗಲೂ ಅದರ ರನ್ನಿಂಗ್ ನಡೆದಿತ್ತು.

2 comments:

  1. ಕೇಶವ್ ಪ್ರಸಾದ್ ಅವರೇ ನಿಮ್ಮ ಲೇಖನ ಹಾಗೂ ಚಿತ್ರ ತುಂಬಾ ಚೆನ್ನಾಗಿವೆ.
    ಹಾಗೇ ನನ್ನ ಬ್ಲಾಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು. ಹೀಗೆ ಬರ್ತಾ ಇರಿ.

    -ಗಣೇಶ್ ಕಾಳೀಸರ.

    ReplyDelete
  2. ನಿಮ್ಮ ಲೇಖನದ ಬಡ ಮಹಿಳೆಯ ಜೀವನ ದ್ರಶ್ಯ ನೋಡಿ (ಕೇಳಿ) ಅಯ್ಯೋ ಅನಿಸಿತು.
    ಲೇಖನ ಚೆನ್ನಾಗಿದೆ.
    ರವಿ ಹೆಗಡೆ

    ReplyDelete