
ಕುವೆಂಪು ಅವರ " ರಾಮ ರಾವಣರ ಯುದ್ಧ " ಎಂಬ ಮನೋಜ್ಞ ಲಘು ಪ್ರಬಂಧದ ಕೆಲವು ಸಾಲುಗಳಿವು. ಗೋರೂರು ರಾಮಸ್ವಾಮಿ ಐಯ್ಯಂಗಾರ್ ಸಂಪಾದಿಸಿದ ಹೊಸಗನ್ನಡ ಪ್ರಬಂಧ ಸಂಕಲನದಲ್ಲಿ ಈ ಪ್ರಬಂಧವನ್ನು ಪ್ರಕಟಿಸಲಾಗಿದೆ. ಈ ಸಾಲುಗಳನ್ನು ಓದುತ್ತಿದ್ದಂತೆ ನನಗೆ ಬಾಲ್ಯದ ದಿನಗಳು ನೆನಪಾಯಿತು.
ಕಳತ್ತೂರು ಎಂದರೆ ಕಿದೂರಿಗೆ ಸಮೀಪದ ಗ್ರಾಮ. ಅಲ್ಲಿ ನಾನು ಓದಿದ ಪ್ರಾಥಮಿಕ ಶಾಲೆ ಮತ್ತು ಅದರ ಆಟದ ಮೈದಾನ ಇದೆ. ಪ್ರತಿ ವರ್ಷ ಅಲ್ಲಿ ಯಕ್ಷಗಾನ ನಡೆಯುತ್ತಿತ್ತು. ಯಕ್ಷಗಾನದ ದಿನ ಹಗಲು ಜೀಪಿನಲ್ಲಿ ಸಂಬಂಧಪಟ್ಟವರು ಕರ ಪತ್ರಗಳನ್ನು ಬಿಸಾಡುತ್ತ , ಮೈಕ್ ನಲ್ಲಿ ಯಕ್ಷಗಾನದ ಬಗ್ಗೆ ಘೋಷಣೆ ಹೊರಡಿಸುತ್ತಿದ್ದರು.
ಇಂದು ರಾತ್ರಿ ಕಳತ್ತೂರು ಶಾಲೆಯ ಮೈದಾನದಲ್ಲಿ, ಪೆರ್ಡೂರು ಮೇಳದ ವತಿಯಿಂದ ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ರಂಗಮಂಟಪದಲ್ಲಿ ಸಾಮ್ರಾಟ್ ನಹುಷೇಂದ್ರ ಎಂಬ ಪೌರಾಣಿಕ ಕಥಾ ಪ್ರಸಂಗವನ್ನು ನೋಡಲು ಮರೆಯದಿರಿ..ಅಂತ ಮೈಕ್ ನಲ್ಲಿ ಅವರು ಕೂಗುತ್ತಿದ್ದರೆ, ತರಗತಿಯಲ್ಲಿ ಕೂತಿರುತ್ತಿದ್ದ ನಮಗೆಲ್ಲ ಕಿವಿ ನೆಟ್ಟಗಾಗುತ್ತಿತ್ತು. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಜೀಪು ಬಂದರೆ, ಚಿಣ್ಣರೆಲ್ಲ ಅದರ ಹಿಂದೆಯೇ ಓಡುತ್ತಿದ್ದರು. ಅವರು ಎಸೆಯುತ್ತಿದ್ದ ಕರಪತ್ರಗಳನ್ನು ಹೆಕ್ಕಿ ಸಂಭ್ರಮಿಸುತ್ತಿದ್ದರು. ನಾನೂ ಸಾಕಷ್ಟು ಸಲ ಜೀಪಿನ ಹಿಂದೆ ಓಡಿದ್ದೆ. ಆದರೆ ಕರಪತ್ರ ಸಿಕ್ಕಿರಲಿಲ್ಲ. ಆದರೂ ನನಗೆ ಅಂತಹ ಬೇಸರವಾಗುತ್ತಿರಲಿಲ್ಲ. ಮನೆಯಲ್ಲಿ ಮಾವ ಎಲ್ಲಿಂದಲೋ ಕರಪತ್ರ ತಂದು ಇಡುತ್ತಿದ್ದರು. ಅದನ್ನು ಒಂದಕ್ಷರ ಬಿಡದೆ ಓದುತ್ತಿದ್ದೆ.
ಸಂಜೆ ಕಳೆದು ಕತ್ತಲಾವರಿಸುತ್ತಿದ್ದಂತೆ ಮೈದಾನದಲ್ಲಿ ಮೇಳದ ಭಾರಿ ಟೆಂಟನ್ನು, ಅವುಗಳ ಪರದೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಟ್ಯೂಬ್ ಲೈಟ್ ಗಳ ಬೆಳಕು ಆಕರ್ಷಿಸುತ್ತಿತ್ತು. ಟೆಂಟ್ ಪಕ್ಕದಲ್ಲಿ ಸೋಜಿ ಪಾಯಸವನ್ನು ಬೀದಿ ವ್ಯಾಪಾರಿಗಳು ಮಾರುತ್ತಿದ್ದರು. ಆದರೆ ಯಾಕೋ ನನಗೆ ಅದು ಇಷ್ಟವಾಗುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ಆಸೆಯಾದರೂ ಯಾರೂ ಕೊಡಿಸುತ್ತಿರಲಿಲ್ಲ. ಮನೆಯವರೂ ಸೇವಿಸುತ್ತಿರಲಿಲ್ಲ. ಏನಿದ್ದರೂಮನೆಯಲ್ಲಿ ಮಾಡುವ ಪಾಯಸ ಮಾತ್ರ ಕುಡಿಯುತ್ತಿದ್ದೆವು. ಯಕ್ಷಗಾನಕ್ಕೆ ಅಜ್ಜಿ, ಅತ್ತೆ, ಅಕ್ಕ, ಮಾವಂದಿರ ಜತೆ ಹೋಗುತ್ತಿದ್ದೆ. ಅಲ್ಲಿ ನನ್ನ ಗೆಳೆಯರೂ ಸಿಗುತ್ತಿದ್ದರು. ಎಲ್ಲ ಒಟ್ಟಿಗೆ ಕೂತು ಯಕ್ಷಗಾನವನ್ನು ಆನಂದಿಸುತ್ತಿದ್ದೆವು. ಚೆಂಡೆಯ ಅಬ್ಬರದಲ್ಲೂ ನಿದ್ದೆಯ ಜೊಂಪು ಆವರಿಸುತ್ತಿತ್ತು. ತಡರಾತ್ರಿಯಾದ ಮೇಲಂತೂ ಎಲ್ಲವೂ ಮಾಯಾ ಲೋಕದಂತೆ ಕಾಣಿಸುತ್ತಿತ್ತು. ಬಣ್ಣದ ವೇಷಗಳು ಕುಣಿಯುವಾಗ ಭಯವಾಗುತ್ತಿದ್ದರೂ ಹೇಳಿಕೊಳ್ಳುತ್ತಿರಲಿಲ್ಲ. ಬೆಳಗಿನ ಜಾವ ಚಳಿಯಿಂದ ನಡುಗುತ್ತಿದ್ದರೂ ಚೆಂಡೆಯ ಸದ್ದಿಗೆ ಅಷ್ಟಿಷ್ಟು ಮರೆಯುತ್ತಿದ್ದೆ.
ಮರುದಿನ ತರಗತಿಗೆ ಬಂದು ಕುಳಿತರೂ, ಕಿವಿಯಲ್ಲಿ ತುಂಬ ಭಾಗವತರ ಕಂಚಿನ ಕಂಠದ ಪದಗಳು, ಚೆಂಡೆಯ ಸದ್ದು ಮಾರ್ದನಿಸುತ್ತಿತ್ತು...ಆ ದಿನಗಳು ಮತ್ತೊಮ್ಮೆ ಬರುವುದಿಲ್ಲವಲ್ಲ ಅಂತ ಈಗ ಕೊಂಚ ಬೇಸರವಾಗುತ್ತಿದೆ.
Thanks for making the olden (Golden, rather I say)days remember...
ReplyDeletethaks harish
ReplyDelete