Wednesday 26 August 2009

ಅಜ್ಜನ ತೋಟದ ಪೇರಳೆಕಾಯಿಯ ಮರದ ನೆನಪು

ಸೀಬೆಕಾಯಿಯನ್ನು ನಮ್ಮೂರಿನಲ್ಲಿ ಪೇರಳೆ ಎಂದೇ ಕರೆಯುತ್ತಿದ್ದೆವು.
ನನಗೆ ಹಲವಾರು ವರ್ಷಗಳ ಕಾಲ ಸೀಬೆ ಕಾಯಿ ಅಂತ ಯಾವುದಕ್ಕೆ ಹೇಳುತ್ತಾರೆ ಎಂದೇ ಗೊತ್ತಿರಲಿಲ್ಲ. ನನಗಂತೂ ಬಾಲ್ಯದಲ್ಲಿ ಸೀಬೆ ಕಾಯಿ, ಮಾವಿನ ಕಾಯಿ, ನೆಲ್ಲಿಕಾಯಿ ಮತ್ತು ತೆಂಗಿನಕಾಯಿಯ ಚೂರು ತಿನ್ನುವುದೆಂದರೆ ಬಲು ಪ್ರಿಯವಾಗಿತ್ತು. ಅಜ್ಜನ ಮನೆಯ ತೋಟದಲ್ಲೊಂದು ಪೇರಳೆಯ ಮರವಿತ್ತು. ಅದರ ಕೆಳಗೆ ದೊಡ್ಡ ಹೊಂಡ ಹಾಗೂ ಅದಕ್ಕೆ ಹೊಂದಿಕೊಂಡಂತೆ ಕೆರೆ ಇತ್ತು. ಪೇರಳೆ ಕಾಯಿಯನ್ನು ಹಣ್ಣಾಗಲು ಬಿಡದೆ ಎಳೆಯ ಕಾಯಿಯನ್ನೇ ಕಿತ್ತು ತಿನ್ನುತ್ತಿದ್ದೆ. ಆ ಮರದಲ್ಲಿ ಪೇರಳೆಯ ಫಲವೇಕೋ ಹೆಚ್ಚಿಗೆ ಆಗುತ್ತಿರಲಿಲ್ಲ. ಆದರೂ ಇಡೀ ಮರವನ್ನು ಹುಡುಕಿ ಹುಡುಕಿ ಕೊಯ್ಯುತ್ತಿದ್ದೆ. ಏನೂ ಸಿಗದಿದ್ದರೆ ಎಳೆಯ ಚಿಗುರನ್ನೇ ತಿಂದು ತೃಪ್ತಿಪಡುತ್ತಿದ್ದೆ. ಅದರ ಒಗರು ನನಗೆ ಅಹ್ಲಾದ ನೀಡುತ್ತಿತ್ತು. ಆಗ ಎಷ್ಟು ಅಪಾಯ ಎದುರಿಸುತ್ತಿದ್ದೆ ಎಂದು ನೆನಸಿ ಈಗ ಅಚ್ಚರಿಯಾಗುತ್ತಿದೆ. ವಾರೆಕೋರೆಯ ರೆಂಬೆಗಳ ಮೇಲಿಂದ ಕಾಲಿಡುವಾಗ ಅಕಸ್ಮಾತ್ ಜಾರಿದರೆ ಸೀದಾ ದೊಡ್ಡ ಹೊಂಡಕ್ಕೆ ಬೀಳುವ ಸಾಧ್ಯತೆ ಇತ್ತು. ಅದರ ಪಕ್ಕವೇ ಕೆರೆ ಬೇರೆ. ಆದರೆ ಸೀಬೆಕಾಯಿಯಯ ಮೇಲಿನ ಪ್ರೀತಿಯಿಂದ ಉಳಿದೆಲ್ಲ ಅಪಾಯವನ್ನು ಲೆಕ್ಕಿಸುತ್ತಿರಲೇ ಇಲ್ಲ.
ಆ ಮರ ಹೆಚ್ಚಿಗೆ ಫಲ ಕೊಡುತ್ತಿರಲಿಲ್ಲ ಹಾಗೂ ಅಕಸ್ಮಾತ್‌ ಎತ್ತರದಲ್ಲಿ ನನ್ನ ಕೈಗೂ ಸಿಕ್ಕದೆ ಹಣ್ಣಿದ್ದರೂ, ಅದು ಕೆರೆಗೋ, ಹೊಂಡಕ್ಕೋ ಬೀಳುತ್ತಿತ್ತು.ಕೆಲವೊಮ್ಮೆ ಮಂಗನ ಜಾತಿಗೆ ಸೇರಿದ ಮುಜುವಿಗೋ ಆಹಾರವಾಗುತ್ತಿತ್ತು. ಹೀಗಾಗಿ ಎಲ್ಲರಿಗೂ ಆ ಮರ ನಗಣ್ಯವಾಗಿತ್ತು. ಆದರೆ ನನಗಂತೂ ಆ ಮರ ಬೇರೆಯೇ ಪ್ರಪಂಚವನ್ನು ಕಟ್ಟಿಕೊಡುತ್ತಿತ್ತು. ಆ ಮರದ ಕೊಂಬೆಯಲ್ಲಿ ನಿಂತುಕೊಂಡು ಕೆರೆಗೆ ಕಲ್ಲೆಸೆಯುತ್ತಿದ್ದೆ. ಆಗ ಕೆರೆಯಿಂದೇಳುವ ಚುಳುಕ್ ಬುಳುಕ್ ಸದ್ದು ಖುಷಿ ಕೊಡುತ್ತಿತ್ತು. ಮನೆಯಲ್ಲಿ ಯಾವುದಾದರೂ ತುಂಟಾಟಕ್ಕೆ ಹಿರಿಯರು ಬೈದರೆ, ಸೀದಾ ತೋಟಕ್ಕಿಳಿದು ಸೀಬೇಕಾಯಿಯ ಮರವನ್ನೇರುತ್ತಿದ್ದೆ. ಹೀಗಾಗಿ ನನಗದು ಸಿಕ್ಕಾಪಟ್ಟೆ ಆಪ್ತವಾಗಿತ್ತು. ಬೇಸಗೆಯ ರಜೆಯಲ್ಲಿ ಪೇರಳೆ ಕಾಯಿಯ ಹೋಳು, ಹಲಸಿನ ಹಪ್ಪಳ, ತೆಂಗಿನ ಕಾಯಿಯ ಚೂರುಗಳು ಮತ್ತು ಚಂದಮಾಮ ಕತೆ ಪುಸ್ತಕವನ್ನು ಕಟ್ಟಿಕೊಂಡು ನನ್ನ ಸವಾರಿ ಹೊರಡುತ್ತಿತ್ತು. ಕೆರೆಯ ಕಟ್ಟೆಯಲ್ಲಿಯೋ, ಪೇರಳೆ ಮರದ ಮೇಲೆಯೋ, ಗುಡ್ಡದ ಬಂಡೆಯನ್ನೇರಿಯೋ ಚಂದಮಾಮದ ಪುಟಗಳನ್ನು ತಿರುವುತ್ತಾ, ಹಪ್ಪಳ, ತೆಂಗಿನ ಕಾಯಿಯ ಚೂರು, ಪೇರಳೆಯ ಹೋಳನ್ನು ಮೆಲ್ಲುತ್ತಾ ನನ್ನದೇ ಭಾವಲೋಕದಲ್ಲಿ ಮುಳುಗುತ್ತಿದ್ದೆ. ವಿಕ್ರಮಾದಿತ್ಯನ ಕಥೆಯಲ್ಲಿ ಕೊನೆಗೆ ಅದೊಂದು ಸಾಲು ಬರುತ್ತದೆಯಲ್ವಾ- ನನ್ನ ಪ್ರಶ್ನೆಗೆ ಉತ್ತರಿಸದಿದ್ದರೆ ನಿನ್ನ ತಲೆ ನೂರು ಹೋಳಾಗುತ್ತದೆ..ಅಂತ ! ಆಗ ಉಳಿದ ಪೇರಳೆ ಹೋಳಿನ ನೆನಪಾಗಿ ಬಾಯಿಗೆ ಎಸೆದು ಜಗಿಯುತ್ತಿದ್ದೆ. ನಿಸರ್ಗದ ವೈಭವವನ್ನು ಕಂಡಾಗ ಗದಾಧರ (ರಾಮಕೃಷ್ಣ ಪರಮಹಂಸರು) ಭಾವ ಸಮಾಧಿ ಸ್ಥಿತಿಗೆ ಏರುತ್ತಿದ್ದರಂತೆ ಅಲ್ಲವಾ ? ಹಾಗೆಯೇ ನನಗೇನಾದರೂ ಆಗುತ್ತಾ ಅಂತ ಕಣ್ಮುಚ್ಚುತ್ತಿದ್ದೆ. ಆದರೆ ನನಗೆ ಅಂತಹ ಅನುಭವ ಏನೂ ಆಗುತ್ತಿರಲಿಲ್ಲ. ತಾತ್ಕಾಲಿಕವಾಗಿ ಕಣ್ಣಿಗೆ ಕತ್ತಲಾಗುತ್ತಿತ್ತು ಅಷ್ಟೇ. ಆದರೂ ಆಗಿಂದಾಗ್ಗೆ ಆಗುತ್ತಾ ಅಂತ ಪರೀಕ್ಷಿಸುತ್ತಿದ್ದೆ. ಆ ಮಕ್ಕಳಾಟ ನೆನೆದು ಈಗ ನಗು ಬರುತ್ತೆ.
ಆ ಮರ ಈಗಲೂ ಬಹುಶಃ ಇರಬಹುದು. ಬಾಲ್ಯದಲ್ಲಿ ಹತ್ತಿ ಕುಣಿದಿದ್ದ ಆ ಸೀಬೆಕಾಯಿಯ ಮರವನ್ನು ನೋಡಬೇಕೆಂದು ಆಸೆಯಾಗುತ್ತಿದೆ. ಆದರೆ ಹಲವಾರು ವರ್ಷಗಳ ಹಿಂದೆಯೇ ಆ ತೋಟವನ್ನು ಅಜ್ಜ ಬೇರೆಯವರಿಗೆ ಮಾರಿದ್ದರು. ಮುಂದಿನ ಸಲ ಊರಿಗೆ ಹೋದಾಗ ಕನಿಷ್ಠ ಆ ಪೇರಳೆ ಮರದ ಫೋಟೊ ತೆಗೆದುಕೊಂಡು ಬರಲು ನಿರ್ಧರಿಸಿದ್ದೇನೆ. ಅದನ್ನು ನೋಡುತ್ತಾ ಬೇಕಾದಾಗ ಬಾಲ್ಯದ ದಿನಗಳಿಗೆ ಸೀದಾ ಜಾರಿಕೊಳ್ಳಬಹುದು ಅಲ್ಲವಾ.

1 comment: